ಹೇಮಾವತಿ ನಾಲೆಗೆ ಹಾರಿದ ಎಂಜಿನಿಯರ್ ಕುಟುಂಬ
ತುಮಕೂರು: ಹೇಮಾವತಿ ನಾಲಾ ವಿಭಾಗದ ಎಇಇ ಹಾಗೂ ಪತ್ನಿ ಮಮತಾ, ಮಗಳು ಶುಭಾ ನೀರಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಡೆದಿದೆ. ತುಮಕೂರು ಜಿಲ್ಲೆಯ ಹೇಮಾವತಿ ನಾಲಾ ವಿಭಾಗದ ಎಇಇ ರಮೇಶ್ ಹಾಗೂ ಕುಟುಂಬ ಆತ್ಮಹತ್ಯೆ ಶರಣಾಗಿದ್ದಾರೆ. ಆದರೆ ಘಟನೆಗೆ ನಿಖರವಾದ ಕಾರಣ ತಿಳಿದುಬಂದಿಲ್ಲ. ಅವರುಗಳು ತುಮಕೂರು ಜಿಲ್ಲೆಯ ಗುಬ್ಬಿ ತಾಲೂಕಿನ ಸಾಗರನಹಳ್ಳಿ ಗೇಟ್ ಬಳಿ ಹೇಮಾವತಿ ನಾಲೆಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎನ್ನಲಾಗಿದೆ. ಓಮಿನಿ ಕಾರಿನಲ್ಲಿ ಬಂದಿದ್ದ ಮೂವರೂ ಕೂಡ ಹರಿಯುವ ನೀರಿಗೆ ಹಾರಿ ಆತ್ಮಹತ್ಯೆಗೆ ಶರಣಾಗಿದ್ದು ಹಲವು ಅನುಮಾನಗಳು ಹುಟ್ಟು ಹಾಕಿವೆ.
ಇನ್ನು ರಮೇಶ್ ತಿಪಟೂರು ತಾಲೂಕಿನ ಕಿಬ್ಬನಹಳ್ಳಿ ಕ್ರಾಸ್ ನಲ್ಲಿ ಹೇಮಾವತಿ ನಾಲಾ ವಿಭಾಗದ ಎಂಜಿನಿಯರ್ ಆಗಿ ಕಾರ್ಯನಿರ್ವಹಿಸುತ್ತಿದ್ದರು. ತುಮಕೂರು ನಗರದಲ್ಲಿ ಕುಟುಂಬ ಸಮೇತ ವಾಸವಿದ್ದರು. ಅವರಿಗೆ ಪತ್ನಿ ಹಾಗೂ ಇಬ್ಬರು ಹೆಣ್ಣು ಮಕ್ಕಳು ಇದ್ದರು. ಮಹಾರಾಷ್ಟ್ರದ ಸೊಲ್ಲಾಪುರ ಮೂಲದ ಹೋಟೆಲ್ ಉದ್ಯಮಿಗೆ ಮಗಳು ಶುಭಾಳನ್ನ 15 ದಿನಗಳ ಹಿಂದೆ ಮದುವೆ ಮಾಡಿಕೊಡಲಾಗಿತ್ತು.