ಅಕ್ಟೋಬರ್ 23ಕ್ಕೆ ಮೈಸೂರಿನಲ್ಲಿ ದಸರಾ ಏರ್ ಶೋ; ಡಿ.ಸಿ. ಕೆ.ವಿ.ರಾಜೇಂದ್ರ
ಮೈಸೂರು; ಐದು ವರ್ಷದ ಬಳಿಕ ಈ ಬಾರಿ ಮೈಸೂರು ದಸರಾದಲ್ಲಿ ಏರ್ ಶೋ ನಡೆಸಲಾಗುತ್ತಿದೆ. ಈಗಾಗಲೇ ಕೇಂದ್ರ ಸರ್ಕಾರಕ್ಕೆ ಇದಕ್ಕೆ ಗ್ರೀನ್ ಸಿಗ್ನಲ್ ಕೊಟ್ಟಿದೆ. ಹೀಗಾಗಿ ಮೈಸೂರು ಜಿಲ್ಲಾಡಳಿತ ಏರ್‌ಶೋಗೆ ದಿನಾಂಕ ನಿಗದಿ ಮಾಡಿದೆ. ಇವತ್ತು ಸುದ್ದಿಗೋಷ್ಠಿ ನಡೆಸಿದ ಮೈಸೂರು ಜಿಲ್ಲಾಧಿಕಾರಿ ಡಾ.ಕೆ.ವಿ.ರಾಜೇಂದ್ರ ಅವರು ಈ ಬಗ್ಗೆ ಮಾಹಿತಿ ನೀಡಿದ್ದಾರೆ.
ಜಿಲ್ಲಾಧಿಕಾರಿ ರಾಜೇಂದ್ರ ಅವರು ಇತ್ತೀಚೆಗಷ್ಟೇ ಬನ್ನಿ ಮಂಟಪ ಮೈದಾನಕ್ಕೆ ಭೇಟಿ ನೀಡಿ ಸ್ಥಳ ಪರಿಶೀಲನೆ ನಡೆಸಿದ್ದರು. ಇಂದು ಈ ಬಗ್ಗೆ ಮಾಹಿತಿ ನೀಡಿದ ಅವರು, ಅಕ್ಟೋಬರ್ 22ರಂದು ಏರ್‌ಶೋ ರಿಹರ್ಸಲ್ ನಡೆಯಲಿದೆ. ಅಕ್ಟೋಬರ್ 23ಕ್ಕೆ ದಸರಾ ಏರ್ ಶೋ ನಡೆಯಲಿದೆ ಎಂದು ಹೇಳಿದ್ದಾರೆ. ಅಕ್ಟೋಬರ್ 23 ರಂದು ಸಂಜೆ 4 ಗಂಟೆಗೆ 45 ನಿಮಿಷಕ್ಕೆ ಪಂಜಿನ ಕವಾಯತು ಮೈದಾನದಲ್ಲಿ ಮುಖ್ಯ ಏರ್‌ಶೋ ನಡೆಯಲಿದೆ ಎಂದು ಮಾಹಿತಿ ನೀಡಿದ್ದಾರೆ.
ಇನ್ನು ಏರ್ ಶೋ ವೀಕ್ಷಿಸಲು ಉಚಿತ ಪ್ರವೇಶವಿದೆ. ಏರ್ ಶೋಗೆ ಆಗಮಿಸುವವರಿಗೆ ಪಾಸ್ ನೀಡಲಾಗುವುದು ಎಂದೂ ಜಿಲ್ಲಾಧಿಕಾರಿ ರಾಜೇಂದ್ರ ತಿಳಿಸಿದ್ದಾರೆ.