CrimeDistricts

ಬೆಂಕಿ ಕಾಯಿಸಿಕೊಳ್ಳಲು ಹೋಗಿ ಪ್ರಾಣ ಬಿಟ್ಟ ಕಾರ್ಮಿಕ

ಬಾಗಲಕೋಟೆ: ಚಳಿಗೆ ಹೆದರದೆ ಇರೋ ಮನುಷ್ಯನೇ ಇಲ್ಲ, ಸ್ವೆಟರ್‌, ಟೋಪಿ, ಗ್ಲೌಸ್‌ ಎಲ್ಲವೂ ಹಾಕಿ ಮನೆಯಲ್ಲಿರುವ ರಗ್ಗನ್ನು ಬೆಚ್ಚಗೆ ಹೊದ್ದುಕೊಂಡು ಮಲಗಿದ್ರೆ ಸಾಕು ಎನ್ನುವಷ್ಟರ ಮಟ್ಟಿಗೆ ಚಳಿ ಇರುತ್ತದೆ. ಆದರೆ ಹೊರಗಡೆ ಕೆಲಸಕ್ಕೆ ಹೋಗುವ ಕಾರ್ಮಿಕರಿಗೆ ಇದ್ಯಾವುದೂ ಲಭ್ಯವಿಲ್ಲದ ಕಾರಣ ಅವರು ಬೆಂಕಿ ಮೊರೆ ಹೋಗಿ ರಸ್ತೆ ಬದಿ ಅಥವಾ ಕೆಲಸ ಮಾಡುವ ಕಾರ್ಖಾನೆ ಬಳಿ ಬೆಂಕಿ ಕಾಯಿಸುವುದು ಸರ್ವೆ ಸಾಮಾನ್ಯ ಹೀಗೆ ಚಳಿಗೆ ಬೆಂಕಿ ಕಾಯಿಸಲು ಹೋಗಿ ಓರ್ವ ಅಗ್ನಿಗಾಹುತಿಯಾದ ಘಟನೆ ಬಾಗಲಕೋಟೆ ಜಿಲ್ಲೆ ಬಾದಾಮಿ ತಾಲೂಕಿನ ಕೆರಕಲಮಟ್ಟಿ ಗ್ರಾಮದ ಕೇದಾರನಾಥ ಸಕ್ಕರೆ ಕಾರ್ಖಾನೆ ವ್ಯಾಪ್ತಿಯಲ್ಲಿ ನಡೆದಿದೆ. ಇನ್ನಿಬ್ಬರಿಗೆ ಗಾಯಗಳಾಗಿದ್ದು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಕೈಗಾರಿಕಾ ಸಚಿವ ಮುರುಗೇಶ್‌ ನಿರಾಣಿಯವರಿಗೆ ಸೇರಿದ ಕೇದಾರನಾಥ ಸಕ್ಕರೆ ಕಾರ್ಖಾನೆಯಲ್ಲಿ  ನಿನ್ನೆ ಬೆಳಿಗ್ಗೆ ಅಶೋಕ ಚೌಹಾಣ್, ಪ್ರಮೋದ್, ಮೆಹಬೂಬ್ ಸಾಬ್ ಎಂಬ ಮೂವರು ಕಾರ್ಮಿಕರು ನೀರಿನ ಬ್ಯಾರೆಲ್‌ ಬಳಿ ಬೆಂಕಿ ಹಾಕಿ ಚಳಿಗೆ ಮೈ ಬಿಸಿ ಮಾಡಿಕೊಳ್ತಿದ್ರು. ಬೆಂಕಿ ಸಣ್ಣ ಪ್ರಮಾಣದಲ್ಲಿ ಉರಿಯುತ್ತಿದ್ದರಿಂದ ಥಿನ್ನರ್‌ ಹಾಕಿದ್ದಾರೆ ಕೂಡಲೇ ಬೆಂಕಿ ಜ್ವಾಲೆ ಧಗ್ಗನೆ ಉರಿದು ಮೂವರಿಗೂ ತಗುಲಿದೆ. ಕೂಡಲೇ ಓಡಿ ಬಂದು ನೀರಿನ ಪೈಪ್‌ ಕೆಳಗೆ ಕೂತು ಬೆಂಕಿ ಆರಿಸಿಕೊಂಡಿದ್ದಾರೆ. ಅಷ್ಟರಲ್ಲಾಗಲೇ ಅಶೋಕ್‌ 80% ಬೆಂದು ಹೋಗಿದ್ದ. ಆಸ್ಪತ್ರೆಗೆ ದಾಖಲಿಸಿದ್ರೂ ಚಿಕಿತ್ಸೆ ಫಲಕಾರಿಯಾಗದೆ ಇಂದು ಬೆಳಗ್ಗೆ ಸಾವನ್ನಪ್ಪಿದ್ದಾನೆ. ಆಸ್ಪತ್ರೆ ಬಳಿ ಅಶೋಕ್‌ ಕುಟುಂಬಸ್ಥರ ಆಕ್ರಂದನ ಮುಗಿಲುಮುಟ್ಟಿತ್ತು. ಘಟನೆ ಸಂಬಂಧ ಕೆರೂರು ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Share Post