ಮತ್ತೆ ಕೊವಿಡ್ ಭೀತಿ ಹಿನ್ನೆಲೆ; 60 ವರ್ಷ ಮೇಲ್ಪಟ್ಟವರಿಗೆ ಮಾಸ್ಕ್ ಕಡ್ಡಾಯ!
ಮಡಿಕೇರಿ; ನೆರೆಯ ಕೇರಳದಲ್ಲಿ ಕೊರೊನಾ ರೂಪಾಂತರಿ ತಳಿಯ ಹಾವಳಿ ದಿನೇದಿನೇ ಹೆಚ್ಚಾಗುತ್ತಿದೆ. ಈ ಬೆನ್ನಲ್ಲೇ ರಾಜ್ಯದಲ್ಲೂ ಭೀತಿ ಶುರುವಾಗಿದೆ. ಈ ಹಿನ್ನೆಲೆಯಲ್ಲಿ ರಾಜ್ಯದಲ್ಲಿ ಹೊಸ ಮಾರ್ಗಸೂಚಿ ಬಿಡುಗಡೆ ಮಾಡಲು ನಿರ್ಧಾರ ಮಾಡಲಾಗಿದೆ. ಈ ಬಗ್ಗೆ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಮಾಹಿತಿ ನೀಡಿದ್ದಾರೆ. ಕುಶಾಲನಗರದಲ್ಲಿ ಮಾತನಾಡಿರುವ ಅವರು, ರಾಜ್ಯದ ಜನ ಯಾವುದೇ ಆತಂಕಪಡುವ ಅವಶ್ಯಕತೆ ಇಲ್ಲ. ರಾಜ್ಯದಲ್ಲಿ 60 ವರ್ಷ ಮೇಲ್ಪಟ್ಟವರಿಗೆ ಮಾಸ್ಕ್ ಕಡ್ಡಾಯ ಮಾಡಲು ನಿರ್ಧರಿಸಲಾಗಿದೆ. ಇಂದಿನಿಂದಲೇ ಸರ್ಕಾರಿ ಆದೇಶ ಹೊರಡಿಸಲಾಗುತ್ತದೆ ಎಂದು ಹೇಳಿದ್ದಾರೆ.
ಕೇರಳದಲ್ಲಿ ಕೋವಿಡ್ ಪ್ರಕರಣಗಳು ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಮೊನ್ನೆ ತಾಂತ್ರಿಕ ಸಲಹಾ ಸಮಿತಿ ಸಭೆ ಮಾಡಿದ್ದೇವೆ. ನಿನ್ನೆ ಕೂಡಾ ಮೀಟಿಂಗ್ ಮಾಡಿ ಚರ್ಚೆ ಮಾಡಲಾಗಿದೆ. ತಜ್ಞರಿಂದ ಕೆಲವು ಮಾರ್ಗಸೂಚಿಗಳನ್ನು ತಯಾರಿಸಲಾಗಿದೆ. 60 ವರ್ಷ ಮೇಲ್ಪಟ್ಟವರು ಮತ್ತು ಹೃದಯ, ಕಿಡ್ನಿ ಸಂಬಂಧಿತ ಕಾಯಿಲೆಗಳಿಂದ ಬಳಲುವವರು ಹಾಗೂ ಜ್ವರ, ಕಫ, ಶೀತ ಇರುವಂತಹವರು ಕಡ್ಡಾಯವಾಗಿ ಮಾಸ್ಕ್ ಹಾಕಿಕೊಳ್ಳಬೇಕು ಎಂದು ದಿನೇಶ್ ಗುಂಡೂರಾವ್ ಹೇಳಿದ್ದಾರೆ.