DistrictsPolitics

ರಾಜ್ಯಕ್ಕೆ ಕಾಲಿಟ್ಟ ಭಾರತ್‌ ಜೋಡೋ ಯಾತ್ರೆ; ರಾಹುಲ್‌ಗೆ ಅದ್ದೂರಿ ಸ್ವಾಗತ

ಗುಂಡ್ಲುಪೇಟೆ; ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ನೇತೃತ್ವದಲ್ಲಿ ನಡೆಯುತ್ತಿರುವ ಭಾರತ್ ಜೋಡೊ ಯಾತ್ರೆ ರಾಜ್ಯಕ್ಕೆ ಪ್ರವೇಶ ಮಾಡಿದೆ. ಕೇರಳದಿಂದ ಗುಂಡ್ಲುಪೇಟೆಗೆ ಆಗಮಿಸಿದ್ದು, ಸಾವಿರಾರು ಜನರು ಪಾಲ್ಗೊಂಡಿದ್ದಾರೆ. ಇಲ್ಲಿ ನಡೆದ ಸಾರ್ವಜನಿಕ ಸಭೆಯನ್ನುದ್ದೇಶಿಸಿ ರಾಹುಲ್‌ ಗಾಂಧಿ ಮಾತನಾಡಿದ್ದು, ಭಾರತ್‌ ಜೋಡೋ ಯಾತ್ರೆಯ ಉದ್ದೇಶವನ್ನು ತಿಳಿಸಿದ್ದಾರೆ.

ಕನ್ಯಾಕುಮಾರಿಯಿಂದ ಕಾಶ್ಮೀರದವರೆಗೆ ಯಾತ್ರೆ ಮಾಡಲಾಗುತ್ತಿದೆ. ಬಿಜೆಪಿ, ಆರ್‌ಎಸ್‌ಎಸ್‌ ಸಿದ್ಧಂತದ ವಿರುದ್ಧ ಈ ಯಾತ್ರೆ ಮಾಡಲಾಗುತ್ತಿದ್ದು, ಭಾರತವನ್ನು ಒಗ್ಗೂಡಿಸುವುದು ನಮ್ಮ ಉದ್ದೇಶ ಎಂದು ರಾಹುಲ್‌ ಗಾಂಧಿ ಹೇಳಿದ್ದಾರೆ. ಬಿಸಿಲು, ಮಳೆ ಲೆಕ್ಕಸದೇ ನಾವು ಯಾತ್ರೆ ಮಾಡುತ್ತಿದ್ದೇವೆ. ನಮ್ಮಲ್ಲಿ ಯಾವುದೇ ದ್ವೇಷ, ಅಸೂಯೆ ಕಾಣುವುದಿಲ್ಲ. ನಮ್ಮ ಯಾತ್ರೆಯಲ್ಲಿ ಎಲ್ಲಾ ಧರ್ಮ, ಜಾತಿಯವರೂ ಭಾಗಿಯಾಗಿದ್ದಾರೆ. ನಮ್ಮ ಈ ಯಾತ್ರೆಯನ್ನು ಯಾರಿಗೂ ನಿಲ್ಲಿಸಲು ಆಗುವುದಿಲ್ಲ. ಯಾವ ಶಕ್ತಿಗೂ ಇದು ಸಾಧ್ಯವಿಲ್ಲ ಎಂದು ರಾಹುಲ್‌ ಗಾಂಧಿ ಹೇಳಿದ್ದಾರೆ.

ರಾಜ್ಯಕ್ಕೆ ಕಾಲಿಟ್ಟ ಭಾರತ್‌ ಜೋಡೋ ಯಾತ್ರೆಗೆ ಅದ್ದೂರಿಯಾಗಿ ಸ್ವಾಗತ ಕೋರಲಾಯಿತು. ಕೇರಳದ ಚಂಡೆ, ಗೊರವರ ಕುಣಿತ, ಡೊಳ್ಳು ಕುಣಿತ, ಬ್ಯಾಂಡ್, ಮಂಗಳವಾದ್ಯ ಸೇರಿದಂತೆ ಹಲವು ಕಲಾತಂಡಗಳು ರಾಹುಲ್‌ಗೆ ಸ್ವಾಗತ ಕೋರಿದವು. ಗುಂಡ್ಲುಪೇಟೆಯಲ್ಲಿ 21 ಕಿ.ಮೀ ಪಾದಯಾತ್ರೆ ನಡೆಯಲಿದೆ. ಮಧ್ಯಾಹ್ನ ಭೋಜನದ ನಂತರ ರಾಹುಲ್ ಗಾಂಧಿ ಅವರು ಬುಡಕಟ್ಟು ಸಮುದಾಯದವರು ಹಾಗೂ ಆಮ್ಲಜನಕ ದುರಂತ ದಲ್ಲಿ ಮೃತಪಟ್ಟವರ‌ ಕುಟುಂಬದ ಸದಸ್ಯರೊಂದಿಗೆ ಸಂವಾದ ನಡೆಸಲಿದ್ದಾರೆ.

Share Post