ಸಭಾಪತಿ ಬಸವರಾಜ ಹೊರಟ್ಟಿ ವಿರುದ್ಧ ಎಫ್‍ಐಆರ್; ಇನ್ಸ್‌ಪೆಕ್ಟರ್ ಅಮಾನತು
ಧಾರವಾಡ: ವಿಧಾನಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ ಮೇಲೆ ಎಫ್‍ಐಆರ್ ದಾಖಲು ಪ್ರಕರಣಕ್ಕೆ ಸಂಬಂಧಿಸಿದಂತೆ ಧಾರವಾಡ ಗ್ರಾಮೀಣ ಠಾಣೆಯ ಇನ್ಸ್‌ಪೆಕ್ಟರ್ ಶ್ರೀಧರ ಸತಾರೆಯನ್ನು ಅಮಾನತು ಮಾಡಲಾಗಿದೆ. ಸರ್ವೋದಯ ಶಿಕ್ಷಣ ಸಂಸ್ಥೆ ಹಾಗೂ ವಾಲ್ಮೀಕಿ ಮಹಾಸಭಾ ನಡುವೆ ಇರುವ ವಿವಾದಕ್ಕೆ ಸಂಬಂಧಿಸಿದಂತೆ ಮುಗದ ಗ್ರಾಮದಲ್ಲಿ ಗಲಾಟೆಯೊಂದು ನಡೆದಿತ್ತು. ಈ ಸಂಬಂಧ ಮೋಹನ್ ಗುಡಸಲಮನಿ ಎನ್ನುವವರು ಗ್ರಾಮೀಣ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಸರ್ವೋದಯ ಶಿಕ್ಷಣ ಸಂಸ್ಥೆಯ ಶಿಕ್ಷಕರ ಜೊತೆ ಹೊರಟ್ಟಿಯವರನ್ನು 5ನೇ ಆರೋಪಿಯನ್ನಾಗಿ ಮಾಡಿ ಜನವರಿ 25 ರಂದು ಸತಾರೆ ಪ್ರಕರಣ ದಾಖಲಿಸಿಕೊಂಡಿದ್ದರು.
ಹೊರಟ್ಟಿ ಗಲಾಟೆಗೆ ಕುಮ್ಮಕ್ಕು ನೀಡಿದ್ದಾರೆ ಎಂದು ಅವರ ಮೇಲೆ ಅಟ್ರಾಸಿಟಿ ಕೇಸ್ ಹಾಕಲಾಗಿತ್ತು. ಆ ಬಳಿಕ ಕಳೆದ ಎರಡು ದಿನಗಳ ಹಿಂದೆ ಮೇಲ್ಮನೆಯಲ್ಲಿ ಈ ಬಗ್ಗೆ ಚರ್ಚೆ ಕೂಡಾ ನಡೆದಿತ್ತು. ಕಾಂಗ್ರೆಸ್ ಮತ್ತು ಜೆಡಿಎಸ್ ಸದಸ್ಯರು ಸಭಾಪತಿ ವಿರುದ್ಧ ಕೇಸ್ ದಾಖಲಿಸಿದ ಬಗ್ಗೆ ಸರ್ಕಾರದ ವಿರುದ್ಧ ಕಿಡಿಕಾರಿದ್ದರು. ಆ ಬಳಿಕ ಎಚ್ಚೆತ್ತುಕೊಂಡ ಪೊಲೀಸ್ ಇಲಾಖೆ ಇದೀಗ ಹೊರಟ್ಟಿ ವಿರುದ್ಧ ಪ್ರಕರಣ ದಾಖಲು ಮಾಡಿದ ಇನ್ಸ್‌ಪೆಕ್ಟರ್ ಶ್ರೀಧರ ಸತಾರೆಯನ್ನು ಅಮಾನತುಗೊಳಿಸಿ ಪೊಲೀಸ್ ಮಹಾನಿರ್ದೇಶಕ ಪ್ರವೀಣ್ ಸೂದ್ ಆದೇಶ ಹೊರಡಿ ಸಿದ್ದಾರೆ.