ಪ್ರಧಾನಿ ಮೋದಿ ನಿಷ್ಠೆಯಿಂದ ಚುನಾವಣೆ ಮಾಡುತ್ತಾರೆ; ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡ
ಬೆಂಗಳೂರು: ಕೇಂದ್ರದಲ್ಲಿ ಮನಮೋಹನ್ ಸಿಂಗ್ ಬಳಿಕ ಬಿಜೆಪಿ ಅಧಿಕಾರಕ್ಕೆ ಬಂತು ಇಲ್ಲಿಯವರೆಗೆ ಬಿಜೆಪಿಯನ್ನು ಹಿಮ್ಮುಖ ಮಾಡಲು ಸಾಧ್ಯವಾಗಿಲ್ಲ ಅನ್ನೋದು ವಾಸ್ತವಾಂಶ ಎಂದು ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡ ಹೇಳಿದ್ದಾರೆ. ಜೆಡಿಎಸ್ ಕಛೇರಿ ಜೆಪಿ ಭವನದಲ್ಲಿ ಸುದ್ದಿಗೋಷ್ಠಿ ನಡೆಸಿದ ಅವರು, ಮೋದಿ ಚುನಾವಣೆಯನ್ನು ನಿಷ್ಠೆಯಿಂದ ಮಾಡ್ತಾರೆ. ನಾಲ್ಕು ದಿಕ್ಕಿನಲ್ಲಿ ಪಕ್ಷ ಅಧಿಕಾರಕ್ಕೆ ತರಲು ಪ್ರಯತ್ನ ಮಾಡ್ತಿದ್ದಾರೆ. ಈ ಭಾವನೆ ನಮ್ಮಲ್ಲೂ ಬರಬೇಕು. ಅದಕ್ಕಾಗಿ 20ನೇ ತಾರೀಕು ಬೆಂಗಳೂರಿನಲ್ಲೇ ಸಮಾವೇಶ ಮಾಡುತ್ತೇವೆ ಎಂದು ಹೇಳಿದರು.
ನೀರು ತರುತ್ತೇವೆ ಎಂದು ಎರಡು ತಿಂಗಳ ಹಿಂದೆ ಕಾಂಗ್ರೆಸ್ ಅವರು ಪಾದಯಾತ್ರೆ ಮಾಡಿದ್ರು , ನೀರಾವರಿ ಯೋಜನೆಗೆ ನಾನು ಏನೇನು ಕೊಟ್ಟಿದ್ದೀನಿ ಜನರ ಮುಂದೆ ಇದೆ. ಬಿಜೆಪಿ, ಜೆಡಿಎಸ್ ಏನು ಮಾಡಿದೆ ಅಂತಾ ಸಿದ್ದರಾಮಯ್ಯ ಹೇಳುತ್ತಿದ್ದರು. ನೀವೇ ಉಳಿಸಿಕೊಡಬೇಕು ಅಂತ ನನ್ನ ಮನೆಗೆ ಬಂದಿದ್ದರು ಆಗ , ಈಗ ಕಾವೇರಿ ಕೊಳ್ಳದಲ್ಲಿ ನೀರು ತಂದೇ ಬಿಟ್ವೆವು ಎಂದು ಕಾಂಗ್ರೆಸ್ ನವರು ಹೇಳ್ತಾರೆ ಎಂದು ಅಸಾಮಾಧಾನ ವ್ಯಕ್ತಪಡಿಸಿದರು.
ನಾನು ಬಿಜೆಪಿ ಬಜೆಟ್ ನೋಡಿದ್ದೇನೆ. ಕೃಷ್ಣಾ ಮೇಲ್ದಂಡೆ ಐದು ಸಾವಿರ ಕೋಟಿ ಇಟ್ಟಿದ್ದಾರೆ, ಇದು ಯಾವ ಖುಷಿಗೆ? ಎಂದು ಪ್ರಶ್ನಿಸಿದ ದೇವೇಗೌಡರು, ನನ್ನ ಜಿಲ್ಲೆಯ ಒಂದು ಕುಡಿಯುವ ನೀರಿನ ಯೋಜನೆಗೆ ಮೂರು ಸಾವಿರ ಕೋಟಿ ಇಟ್ಟಿದ್ದಾರೆ. ಅದರ ಯೋಜನಾ ವೆಚ್ಚ 8 ಸಾವಿರ ಕೋಟಿ ಇದೆ. ಏನು ಮಾಡ್ತಾರೆ ಮೂರು ಸಾವಿರ ಕೋಟಿಯಲ್ಲಿ? ಎಂದು ಪ್ರಶ್ನಿಸಿದರು.
ಜೆಡಿಎಸ್ ಪಕ್ಷದ ಬಗ್ಗೆ ಯಾರಿಗೆ ಕಮಿಟ್‌ಮೆಂಟ್ ಇದೆಯೋ ಅಂಥವರಿಂದ ಸಂಘಟನೆ ಮಾಡುತ್ತೇವೆ. ಅವರನ್ನಿಟ್ಟುಕೊಂಡು ಪಕ್ಷ ಉಳಿಸುವ ಕೆಲಸ ಮಾಡುತ್ತೇನೆ. 20 ನೇ ತಾರೀಖು ಮುಂದಿನ ಹೋರಾಟದ ಕಾರ್ಯಕ್ರಮ ರೂಪಿಸುತ್ತೇವೆ. ಎರಡೆರಡು ಜಿಲ್ಲೆಗೆ ಒಂದು ಸಭೆ ಮಾಡುತ್ತೇವೆ , ಈ ಪಕ್ಷ ಉಳಿಸುವ ಕೆಲಸ ಮಾಡುತ್ತೇವೆ ಎಂದರು.