ಕೊಡಗಿನಲ್ಲಿ ಮೂರನೇ ಬಾರಿ ಭೂಮಿ ಕಂಪನ; ಭಯಭೀತರಾದ ಜನ
ಕೊಡಗು; ಕೊಡಗು, ದಕ್ಷಿಣ ಕನ್ನಡ ಜಿಲ್ಲೆಗಳಲ್ಲಿ ಕಳೆದ ಐದು ದಿನಗಳಲ್ಲಿ ಮೂರು ಬಾರಿ ಭೂಕಂಪನವಾಗಿದೆ. ಆಗಾಗ ಸಣ್ಣದಾಗಿ ಭೂಮಿ ನಡುಗುತ್ತಿದೆ. ಇದರಿಂದಾಗಿ ಸಾರ್ವಜನಿಕರಲ್ಲಿ ಆತಂಕ ಶುರುವಾಗಿದೆ. ಇಂದು ಕೂಡಾ ಬೆಳಗ್ಗೆ 7.45 ರ ಸುಮಾರಿಗೆ 3.4 ಸೆಕೆಂಡುಗಳ ಕಾಲ ಭೂಮಿ ನಡುಗಿದೆ.
ಕೊಡಗಿನ ಕರಿಕೆ, ಭಾಗಮಂಡಲ, ನಾಪೋಕ್ಲು, ಪೆರಾಜೆ, ಮಡಿಕೇರಿ, ಸುಳ್ಳೆದ ಸಂಪಾಜೆ, ಗುತ್ತಿಗಾರು ಹಾಗೂ ಗೂನಡ್ಕ ಮುಂತಾದ ಕಡೆ ಭೂಮಿ ಕಂಪಿಸಿದೆ. ಇನ್ನು ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ ತಾಲ್ಲೂಕಿನ ಹಲವೆಡೆ ಭೂಮಿ ಕಂಪಿಸಿದೆ. ಕೊಡಗು ಜಿಲ್ಲೆಯಲ್ಲಿ ಎರಡು ಮೂರು ದಿನಗಳ ಅಂತರದಲ್ಲಿ 3ನೇ ಬಾರಿಗೆ ಭೂ ಕಂಪಿಸಿದೆ. ಬೆಟ್ಟಗುಡ್ಡಗಳಲ್ಲಿ ವಾಸಮಾಡುವ ಜಿಲ್ಲೆಯ ಜನತೆಯಲ್ಲಿ ಮತ್ತೆ ಆತಂಕ ಉಂಟಾಗಿದೆ. ಸುಳ್ಯದಲ್ಲಿ ಎರಡನೇ ಬಾರಿ ಈ ಅನುಭವ ಆಗಿದೆ. 6 ದಿನದ ಹಿಂದೆ ಸೋಮವಾರಪೇಟೆ ಭಾಗ ಮತ್ತು ಹಾಸಗ ಗಡಿ ಭಾಗದಲ್ಲಿ ಭೂ ಕಂಪನವಾಗಿದ್ರೆ ಎರಡು ದಿನಗಳ ಹಿಂದೆ ಸಂಪಾಜೆ ಭಾಗದಲ್ಲಿ ಭೂಮಿ ಕಂಪಿಸಿತ್ತು.
ಸುಳ್ಯದಲ್ಲಿ ಭಾರೀ ವಿಚಿತ್ರ ಶಬ್ದದೊಂದಿಗೆ ಈ ಹಿಂದೆ ಸಂಭವಿಸಿದ ಭೂಕಂಪದ ಶಬ್ದಕಿಂತಲೂ ಹೆಚ್ಚಿನ ರೀತಿಯಲ್ಲಿ ಕೆಲವು ಸೆಕೆಂಡ್‌ಗಳ ಕಾಲ ಭೂಮಿ ಕಂಪಿಸಿದೆ. ಜನರು ಆತಂಕದಲ್ಲಿ ಮನೆಯಿಂದ ಹೊರ ಬಂದಿದ್ದಾರೆ. ಪಾತ್ರೆಗಳು, ಪೀಠೋಪಕರಣಗಳು ಅಲುಗಾಡಿವೆ. ಮನೆಯ ಮೇಲಿನ ರೂಪಿಂಗ್ ಶೀಟ್‌ಗಳು ಕಂಪಿಸಿವೆ.