ಹೇಮಾವತಿ ನದಿ ದಡದಲ್ಲಿ ಶ್ರೀರಾಮನ ಬೃಹದಾಕಾರದ ಪಾದಗಳು ಪ್ರತ್ಯಕ್ಷ!
ಹಾಸನ; ಜನವರಿ 22ರಂದು ಅಯೋಧ್ಯೆಯಲ್ಲಿ ಶ್ರೀರಾಮನ ಪ್ರಾಣಪ್ರತಿಷ್ಠಾಪನೆ ನಡೆಯುತ್ತದೆ. ಇದಕ್ಕಾಗಿ ಈಗಾಗಲೇ ಸಾಕಷ್ಟು ಸಿದ್ಧತೆಗಳು ನಡೆಯುತ್ತಿವೆ. ಹೀಗಿರುವಾಗಲೇ ಶ್ರೀರಾಮನಿಗೂ ಕರ್ನಾಟಕಕ್ಕೂ ಇರುವ ನಂಟಿಗೆ ಉದಾಹರಣೆಯಾಗಿ ಮತ್ತೊಂದು ಕುರುಹು ಸಿಕ್ಕಿದೆ. ಹಾಸನ ಜಿಲ್ಲೆಯ ಆಲೂರು ಬಳಿಯ ಕಾಗನೂರು ಸಮೀಪದಲ್ಲಿ ಶ್ರೀರಾಮನು ಸಂಚಾರ ಮಾಡಿದ್ದ ಎಂಬ ಐತಿಹ್ಯಗಳಿವೆ. ಇದಕ್ಕೆ ಪುಷ್ಠಿ ಎಂಬಂತೆ ಈ ಭಾಗದ ಹೇಮಾವತಿ ನದಿ ದಡದಲ್ಲಿ ಶ್ರೀರಾಮನ ಬೃಹದಾಕಾರದ ಪಾದದ ಗುರುತುಗಳು ಪತ್ತೆಯಾಗಿವೆ.
ಕಾಗನೂರು ಬಳಿಯ ಹೇಮಾವತಿ ನದಿ ದಡದಲ್ಲಿ ಒಂದು ಬೃಹದಾಕಾರದ ಬಂಡೆ ಇದೆ. ಇದರ ಮೇಲೆ ಶ್ರೀರಾಮಚಂದ್ರನ ಪದಾದ ಗುರುತುಗಳು ಸಿಕ್ಕಿವೆ. ಇದರ ಜೊತೆ ಆಂಜನೇಯನ ಪಾದಗಳು ಹಾಗೂ ಶಿವಲಿಂಗ ಕೂಡಾ ಕಾಣಿಸಿದೆ. ಈ ಸ್ಥಳದಿಂದ ಅರ್ಧ ಕಿಲೋ ಮೀಟರ್ ದೂರದಲ್ಲಿ ಪುರಾಣ ಪ್ರಸಿದ್ಧ ಆಂಜನೇಯ ದೇಗುಲವಿರುವುದು ಕೂಡಾ ವಿಶೇಷ.
ಶ್ರೀರಾಮನ ಪಾದಗಳ ಗುರುತು ಇರುವುದು ಗೊತ್ತಾಗುತ್ತಿದ್ದಂತೆ ಸುತ್ತಮುತ್ತಲಿನ ಗ್ರಾಮಗಳು ಜನರು ತಂಡೋಪತಂಡವಾಗಿ ಇಲ್ಲಿಗೆ ಆಗಮಿಸುತ್ತಿದ್ದಾರೆ. ಪಾದಗಳ ದರ್ಶನ ಪಡೆದು ವಿಶೇಷ ಪೂಜೆ ಸಲ್ಲಿಸುತ್ತಿದ್ದಾರೆ.
ಇಲ್ಲಿ ಎಪ್ಪತ್ತರ ದಶಕದಲ್ಲಿ ಜಲಾಶಯ ನಿರ್ಮಾಣ ಮಾಡಲಾಯಿತು. ಇದರಿಂದಾಗಿ ಇಲ್ಲಿರುವ ಬೃಹತ್ ಬಂಡೆ ಮುಳುಗಿತ್ತು. ಆದ್ರೆ ಈ ವರ್ಷ ಮಳೆ ಕಡಿಮೆಯಾಗಿದ್ದರಿಂದ ಜಲಾಶಯದಲ್ಲಿ ನೀರಿನ ಪ್ರಮಾಣ ಕಡಿಮೆಯಾಗಿದೆ. ಹೀಗಾಗಿ ಈ ಬೃಹತ್ ಬಂಡೆ ಕಾಣಿಸಿಕೊಂಡಿದ್ದು, ಅದರ ಮೇಲೆ ಶ್ರೀರಾಮನ ಪಾದಗಳ ಗುರುತು ಇರುವುದು ಪತ್ತೆಯಾಗಿದೆ.
ಲಂಕಾಧೀಶ್ವರ ರಾವಣನ ಸಂಹಾರದ ಬಳಿಕ ಬ್ರಹ್ಮ ಹತ್ಯೆ ದೋಷ ಪರಿಹಾರಕ್ಕಾಗಿ ಲೋಕ ಸಂಚಾರದಲ್ಲಿದ್ದ ರಾಮ ಲಕ್ಷ್ಮಣ ಸೀತೆಯರು ಪುಣ್ಯ ನದಿ ಹೇಮಾವತಿ ದಂಡೆಯಲ್ಲಿ ತಂಗಲು ಬಂದಿದ್ದರು ಎಂದು ಹೇಳಲಾಗುತ್ತಿದೆ.