ಪಂಚಮಸಾಲಿ ಸಮುದಾಯಕ್ಕೆ ಸಿಗುತ್ತಾ 2ಎ ಮೀಸಲಾತಿ; ಸಂಪುಟ ಸಭೆಯತ್ತ ಎಲ್ಲರ ಚಿತ್ತ
ಬೆಳಗಾವಿ; ಪಂಚಮಸಾಲಿ ಸಮುದಾಯಕ್ಕೆ ೨ಎ ಮೀಸಲಾತಿ ನೀಡುವ ಬಗ್ಗೆ ಇಂದು ಮಧ್ಯಾಹ್ನ ನಡೆಯುವ ಸಂಪುಟ ಸಭೆಯಲ್ಲಿ ನಿರ್ಧಾರ ತೆಗೆದುಕೊಳ್ಳುವ ಸಾಧ್ಯತೆ ಇದೆ. ಪಂಚಮಸಾಲಿ ಸಮುದಾಯ ಪಟ್ಟುಬಿಡದೆ ಹೋರಾಟ ನಡೆಸುತ್ತಿರುವುದರಿಂದ ಇಂದು ಸಂಪುಟ ಸಭೆಯಲ್ಲಿ ಮೀಸಲಾತಿಗೆ ಒಪ್ಪಿಗೆ ನೀಡುವ ಸಾಧ್ಯತೆ ಇದೆ.
ಸರ್ಕಾರ ಇತ್ತೀಚೆಗೆ ಎಸ್‍ಟಿ ಮೀಸಲಾತಿ ಹೆಚ್ಚಿಸಿತ್ತು. ಆದ್ರೆ , ಪಂಚಮಸಾಲಿ ಸಮುದಾಯದ ಬೇಡಿಕೆ ಇನ್ನೂ ಈಡೇರಿಸಿಲ್ಲ. ಹೀಗಾಗಿ ಪಂಚಮಸಾಲಿ ಮಿಸಲಾತಿ ಹೋರಾಟ ಸರ್ಕಾರಕ್ಕೆ ಅಂತಿಮ ಗಡುವು ನೀಡಿತ್ತು. ಅದು ನಿನ್ನೆಯೇ ಮುಗಿದಿದೆ. ಹೀಗಾಗಿ ಹೋರಾಟಗಾರರು ಇಂದು ಸುವರ್ಣಸೌಧಕ್ಕೆ ಮುತ್ತಿಗೆ ಹಾಕಲು ನಿರ್ಧರಿಸಿದ್ದಾರೆ. ಅಷ್ಟರೊಳಗೆ ಸಿಹಿ ಸುದ್ದಿ ನೀಡುವ ಸಾಧ್ಯತೆ ಇದೆ.
ಇಂದು ಬೆಳಗಾವಿಯಲ್ಲಿ ಬೃಹತ್ ಪಂಚಮಸಾಲಿ ಸಮಾವೇಶ ನಡೆಯಲಿದೆ. ಸಮುದಾಯಕ್ಕೆ 2ಎ ಮೀಸಲಾತಿ ನೀಡಿದರೆ ಸರ್ಕಾರಕ್ಕೆ ಸನ್ಮಾನ. ಇಲ್ಲದಿದ್ದರೆ ಅಪಮಾನ ಮಾಡುವುದು ಖಚಿತ. ಶಕ್ತಿ ಸೌಧಕ್ಕೆ ಮುತ್ತಿಗೆ ಹಾಕುತ್ತೇವೆ ಎಂದು ಸಮುದಾಯದ ನಾಯಕರು ಗುಡುಗಿದ್ದಾರೆ.
ಪಂಚಮಸಾಲಿ ಮೀಸಲಾತಿ ಹೋರಾಟ ಸಂಬಂಧ ಎಲ್ಲರ ಚಿತ್ತ ಸರ್ಕಾರದ ತೀರ್ಮಾನದತ್ತ ಇದೆ. ಇಂದು ಬೆಳಗಾವಿಯ ಸುವರ್ಣಸೌಧದಲ್ಲಿ ಸಿಎಂ ನೇತೃತ್ವದಲ್ಲಿ ಮಹತ್ವದ ಸಂಪುಟ ಸಭೆ ನಡೆಯಲಿದೆ. ಮೀಸಲಾತಿ ಬಗ್ಗೆ ಮಹತ್ವದ ನಿರ್ಧಾರ ಕೈಗೊಳ್ಳುತ್ತಾರಾ ಅಥವಾ ಮೀಸಲಾತಿ ಬಿಕ್ಕಟ್ಟಿಗೆ ಪರಿಹಾರ ಸೂತ್ರ ಸಿದ್ಧಪಡಿಸಲು ಸಂಪುಟ ಸಭೆ ವೇದಿಕೆಯಾಗುತ್ತಾ ನೋಡಬೇಕಿದೆ.
ಸರ್ಕಾರದ ಬಳಿ ಎರಡು ಪರಿಹಾರ ಸೂತ್ರಗಳಿವೆ. ಹಿಂದುಳಿದ ವರ್ಗಗಳ ಆಯೋಗದ ವರದಿ ಬರೋವರೆಗೆ ಕಾಯಬೇಕು. ಇಲ್ಲವೇ ಪ್ರಸ್ತುತ ಮೀಸಲಾತಿ ಪ್ರಮಾಣದ ಏರಿಕೆಗೆ ತಿರ್ಮಾನ ಮಾಡಿ 2ಎಗೆ ಶಿಫಾರಸ್ಸು ಮಾಡಬೇಕು. ಯಾಕಂದರೆ ಇನ್ನೂ 12 ಜಿಲ್ಲೆಗಳಲ್ಲಿ ಹಿಂದುಳಿದ ವರ್ಗಗಳ ಆಯೋಗದಿಂದ ಅಧ್ಯಯನ ಬಾಕಿಯಿದೆ. ಹೀಗಾಗಿ ಸರ್ಕಾರದ ನಿರ್ಧಾರ ಏನು ಎನ್ನುವುದು ಕುತೂಹಲಕ್ಕೆ ಕಾರಣವಾಗಿದೆ.