ಯಶವಂತಪುರದಿಂದ ಹೊರಟಿದ್ದ ರೈಲು ಸರಣಿ ಅಪಘಾತ; 233 ಮಂದಿ ದಾರುಣ ಸಾವು
ಬೆಂಗಳೂರು; ಒಡಿಶಾದ ಬಾಲಸೋರ್ ನಿಲ್ದಾಣದ ಬಳಿ ಭೀಕರ ರೈಲು ಅಪಘಾತ ನಡೆದಿದೆ. ಘಟನೆಯಲ್ಲಿ 233 ಮಂದಿ ಸಾವನ್ನಪ್ಪಿದ್ದಾರೆ. ಇನ್ನೂ 900 ಮಂದಿ ತೀವ್ರವಾಗಿ ಗಾಯಗೊಂಡಿದ್ದು, ಅವರಿಗೆ ಚಿಕಿತ್ಸೆ ನೀಡಲಾಗುತ್ತಿದೆ.
ರಾತ್ರಿ 7 ಗಂಟೆ ಸುಮಾರಿಗೆ ಈ ದುರಂತ ನಡೆದಿದೆ. ಅಪಘಾತ ಸ್ಥಳಕ್ಕೆ 200ಕ್ಕೂ ಹೆಚ್ಚು ಆಂಬ್ಯುಲೆನ್ಸ್‌ಗಳನ್ನು ರವಾನಿಸಲಾಗಿದೆ ಎಂದು ಹೇಳಲಾಗಿದೆ. ಇದು ಈ ಶತಮಾನದ ಭಾರತದಲ್ಲಿ ನಡೆದ ಅತ್ಯಂತ ಭೀಕರ ರೈಲು ಅಪಘಾತಗಳಲ್ಲಿ ಒಂದಾಗಿದೆ.
ಈ ಅಪಘಾತದಲ್ಲಿ ಸಾವಿನ ಸಂಖ್ಯೆ ಹೆಚ್ಚಾಗುವ ಸಾಧ್ಯತೆ ಇದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಕೋರಮಂಡಲ್ ಎಕ್ಸ್‌ಪ್ರೆಸ್, ಹೌರಾ ಸೂಪರ್‌ಫಾಸ್ಟ್ ಎಕ್ಸ್‌ಪ್ರೆಸ್ ಮತ್ತು ಇನ್ನೊಂದು ಗೂಡ್ಸ್ ರೈಲಿಗೆ ಅಪಘಾತ ಸಂಭವಿಸಿದೆ. ಮೊದಲು ಚೆನ್ನೈಗೆ ಹೊರಟಿದ್ದ ಕೋರಮಂಡಲ್ ಎಕ್ಸ್‌ಪ್ರೆಸ್ ರೈಲು ಗೈಡ್ಸ್ ರೈಲಿಗೆ ಡಿಕ್ಕಿ ಹೊಡೆದಿದೆ. ಇದರಿಂದಾಗಿ ಕೋರಮಂಡಲ್ ಎಕ್ಸ್‌ಪ್ರೆಸ್ ರೈಲಿಗೆ 20ಕ್ಕೂ ಹೆಚ್ಚು ಭೋಗಿಗಳು ಪಕ್ಕದ ಟ್ರ್ಯಾಕ್ ಮೇಲೆ ಉರುಳಿಬಿದ್ದಿವೆ. ಸ್ವಲ್ಪ ಸಮಯದಲ್ಲೇ ಬೆಂಗಳೂರಿನ ಯಶವಂತಪುರದಿಂದ ಹೊರಟಿದ್ದ ಹೌರಾ ಸೂಪರ್ ಫಾಸ್ಟ್ ರೈಲು ಡಿಕ್ಕಿ ಹೊಡೆದಿದೆ.
ಅಪಘಾತದಲ್ಲಿ ಗಾಯಗೊಂಡವರಿಗೆ ಚಿಕಿತ್ಸೆ ನೀಡಲು 100 ಕ್ಕೂ ಹೆಚ್ಚು ವೈದ್ಯರು ಸ್ಥಳಕ್ಕೆ ಧಾವಿಸಿದರು. ಅಪಘಾತದ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ. “ರೈಲ್ವೆ ಅಪಘಾತದ ಪ್ರದೇಶದಲ್ಲಿ ರಕ್ಷಣಾ ಕಾರ್ಯಾಚರಣೆ ನಡೆಯುತ್ತಿದೆ. ಈ ಅಪಘಾತದಲ್ಲಿ ಗಾಯಗೊಂಡವರು ಮತ್ತು ಹಾನಿಗೊಳಗಾದವರಿಗೆ ನಾವು ಅಗತ್ಯವಿರುವ ಎಲ್ಲಾ ನೆರವು ನೀಡುತ್ತೇವೆ, ”ಎಂದು ಮೋದಿ ಟ್ವೀಟ್ ಮಾಡಿದ್ದಾರೆ.
“ಅಪಘಾತ ಸಂಭವಿಸಿದಾಗ 10 ರಿಂದ 15 ಜನರು ನನ್ನ ಮೇಲೆ ಬಿದ್ದರು. ಇದ್ದಕ್ಕಿದ್ದಂತೆ ಪರಿಸ್ಥಿತಿ ಗೊಂದಲಮಯವಾಯಿತು. ” ಎಂದು ಅಪಘಾತದಿಂದ ಬದುಕುಳಿದ ವ್ಯಕ್ತಿಯೊಬ್ಬರು ಹೇಳಿದ್ದಾರೆ.
“ನನ್ನ ಕೈಗೆ ಗಾಯವಾಗಿದೆ. ಅಲ್ಲದೆ, ನನ್ನ ಕತ್ತಿನ ಹಿಂಭಾಗಕ್ಕೆ ನೋವುಂಟಾಗಿದೆ. ನಾನು ರೈಲಿನಿಂದ ಹೊರಬಂದಾಗ, ಕೆಲವರು ತಮ್ಮ ಕೈಗಳನ್ನು ಕಳೆದುಕೊಂಡರು ಮತ್ತು ಕೆಲವರು ತಮ್ಮ ಕಾಲುಗಳನ್ನು ಕಳೆದುಕೊಂಡಿರುವುದನ್ನು ನಾನು ನೋಡಿದೆ. ಅವರಲ್ಲಿ ಕೆಲವರ ತಲೆಯೇ ಕಟ್ ಆಗಿತ್ತು,” ಎಂದು ಅಪಘಾತದಲ್ಲಿ ಬದುಕುಳಿದ ವ್ಯಕ್ತಿಯೊಬ್ಬರು ತಿಳಿಸಿದ್ದಾರೆ.
ಶುಕ್ರವಾರ ರಾತ್ರಿ ನಡೆದ ಅಪಘಾತದ ಬಗ್ಗೆ ಉನ್ನತ ಮಟ್ಟದ ತನಿಖೆಗೆ ಆದೇಶಿಸಲಾಗಿದೆ ಎಂದು ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಹೇಳಿದ್ದಾರೆ. “ಈ ಅಪಘಾತ ದುರದೃಷ್ಟಕರ. ಅಪಘಾತದ ಬಗ್ಗೆ ತಿಳಿದ ತಕ್ಷಣ ನಾವು ಪರಿಹಾರ ಕಾರ್ಯಾಚರಣೆಯನ್ನು ಪ್ರಾರಂಭಿಸಿದ್ದೇವೆ ಎಂದು ಸಚಿವ ಅಶ್ವಿನಿ ವೈಷ್ಣವ್ ತಿಳಿಸಿದ್ದಾರೆ.
ಈ ಅಪಘಾತದಲ್ಲಿ ಗಾಯಗೊಂಡ ಕೆಲವರು ಬಾಲಸೋರ್‌ನ ಫಕೀರ್ ಮೋಹನ್ ವೈದ್ಯಕೀಯ ಕಾಲೇಜಿನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಮತ್ತು ಕೆಲವರು ಕಟಕ್‌ನ ಎಸ್‌ಸಿಬಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಒಡಿಶಾ ಸರ್ಕಾರವು ಇಂದಿನ ಎಲ್ಲಾ ಸರ್ಕಾರಿ ಕಾರ್ಯಕ್ರಮಗಳನ್ನು ರದ್ದುಗೊಳಿಸಿದೆ,
ಒಡಿಶಾದಲ್ಲಿ ಸಂಭವಿಸಿದ ಈ ಭೀಕರ ರೈಲು ಅಪಘಾತದ ಹಿನ್ನೆಲೆಯಲ್ಲಿ ಗೋವಾ-ಮುಂಬೈ ವಂದೇ ಭಾರತ್ ಎಕ್ಸ್‌ಪ್ರೆಸ್‌ನ ಉದ್ಘಾಟನಾ ಕಾರ್ಯಕ್ರಮವನ್ನು ರದ್ದುಗೊಳಿಸಲಾಗಿದೆ ಎಂದು ಕೊಂಕಣ ರೈಲ್ವೆ ಅಧಿಕಾರಿಗಳು ತಿಳಿಸಿದ್ದಾರೆ.
1981 ರಲ್ಲಿ 800 ಜನ ಸಾವನ್ನಪ್ಪಿದ್ದರು
ಭಾರತವು ವಿಶ್ವದ ಅತಿದೊಡ್ಡ ರೈಲ್ವೆ ಜಾಲವನ್ನು ಹೊಂದಿದೆ. ಮೂಲಸೌಕರ್ಯಗಳನ್ನು ಸುಧಾರಿಸಲು ಸರ್ಕಾರಗಳು ಸಾವಿರಾರು ಕೋಟಿಗಳನ್ನು ಹೂಡಿಕೆ ಮಾಡಿದರೂ ಅಪಘಾತಗಳನ್ನು ತಡೆಯಲು ಸಾಧ್ಯವಾಗುತ್ತಿಲ್ಲ.
ಭಾರತದ ಅತ್ಯಂತ ಭೀಕರ ರೈಲು ಅಪಘಾತ 1981 ರಲ್ಲಿ ಸಂಭವಿಸಿತ್ತು. ಬಿಹಾರ ರಾಜ್ಯದಲ್ಲಿ ಚಂಡಮಾರುತದ ವೇಳೆ ಪ್ರಯಾಣಿಕರನ್ನು ಹೊತ್ತೊಯ್ಯುತ್ತಿದ್ದ ಪ್ಯಾಸೆಂಜರ್ ರೈಲು ಹಳಿತಪ್ಪಿ ನದಿಗೆ ಉರುಳಿತ್ತು. ಈ ಸಮಯದಲ್ಲಿ ಸುಮಾರು 800 ಜನರು ಸಾವನ್ನಪ್ಪಿದ್ದರು.