60 ಲಕ್ಷ ರೂ.ಗಳೊಂದಿಗೆ ಎಟಿಎಂ ಕ್ಯಾಶ್ ವಾಹನದ ಡ್ರೈವರ್ ಎಸ್ಕೇಪ್
ಕಡಪ; ಎಟಿಎಂಗೆ ತುಂಬಿಸಲು ಸಾಗಿಸಲಾಗುತ್ತಿದ್ದ 60 ಲಕ್ಷ ರೂಪಾಯಿಯೊಂದಿಗೆ ವಾಹನದ ಸಮೇತ ಅದರ ಚಾಲಕ ಪರಾರಿಯಾಗಿರುವ ಘಟನೆ ಆಂಧ್ರಪ್ರದೇಶದ ಕಡಪದಲ್ಲಿ ನಡೆದಿದೆ. ಸಿಎಂಎಸ್ ಏಜೆನ್ಸಿಗೆ ಸೇರಿದ ವಾಹನ ಇದಾಗಿದೆ.
ಸಿಎಂಎಸ್ ಏಜೆನ್ಸಿಯಿಂದ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದಿಂದ ಪ್ರತಿದಿನ ಲಕ್ಷಾಂತರ ರೂಪಾಯಿ ಹಣ ತೆಗೆದುಕೊಂಡು ವಿವಿಧ ಎಟಿಎಂಗಳಿಗೆ ತುಂಬಿಸಲಾಗುತ್ತದೆ. ಪ್ರತಿ ವಾಹನದಲ್ಲಿ ಓರ್ವ ತಾಂತ್ರಿಕ ಸಿಬ್ಬಂದಿ ಮತ್ತು ಓರ್ವ ಸೆಕ್ಯೂರಿಟಿ ಗಾರ್ಡ್ ಇರುತ್ತಾರೆ. ಇಂದು ಕೂಡಾ ಎಂದಿನಂತೆ ಒಂದು ವಾಹನ 80 ಲಕ್ಷ ರೂಪಾಯಿ ನಗದು ತೆಗೆದುಕೊಂಡು ಹೊರಟಿದೆ. ಆದ್ರೆ ವಾಹನ ಚಾಲಕ ಇತರ ಸಿಬ್ಬಂದಿಯ ಕಣ್ತಪ್ಪಿಸಿ ಹಣದೊಂದಿಗೆ ಎಸ್ಕೇಪ್ ಆಗಿದ್ದಾನೆ.
ಕಡಪ ನಗರದ ಶಾರುಖ್ ಎಂಬಾತನೇ ಹಣದೊಂದಿಗೆ ಪರಾರಿಯಾಗಿರುವ ಡ್ರೈವರ್. ಕಡಪ ನಗರದ ಐಟಿಐ ಜಂಕ್ಷನ್ನಲ್ಲಿನ ಎಸ್ಬಿಐ ಎಟಿಎಂ ಬಳಿ ವಾಹನ ನಿಲ್ಲಿಸಲಾಗಿತ್ತು. ಈ ವೇಳೆ ಸೆಕ್ಯೂರಿಟಿ ಗಾರ್ಡ್ ಎಟಿಎಂ ಬಳಿ ಕಾವಲು ಇದ್ದ, ತಾಂತ್ರಿಕ ಸಿಬ್ಬಂದಿ ಎಟಿಎಂನಲ್ಲಿ ಹಣ ತುಂಬಿಸುತ್ತಿದ್ದರು. ಇದಕ್ಕಾಗಿಯೇ ಕಾಯುತ್ತಿದ್ದ ಡ್ರೈವರ್, 60 ಲಕ್ಷ ರೂಪಾಯಿಗಳೊಂದಿಗೆ ವಾಹನ ಸಮೇತ ಎಸ್ಕೇಪ್ ಆಗಿದ್ದಾನೆ.
ನಂತರ ಕಡಪ ಹೊರವಲಯದ ವಿನಾಯಕ ನಗರದಲ್ಲಿ ವಾಹನ ಬಿಟ್ಟು ಹಣದ ಬಾಕ್ಸ್ಗಳನ್ನು ಮಾತ್ರ ತೆಗೆದುಕೊಂಡು ಹೋಗಿದ್ದಾನೆ. ಪೊಲೀಸರು ಆತನಿಗಾಗಿ ಹುಡುಕಾಟ ನಡೆಸುತ್ತಿದ್ದಾರೆ.