ಪ್ರಿಯಕರನ ಜೊತೆ ಎಸ್ಕೇಪ್ ಆಗಿದ್ದ ನವ ವಧು ಆತ್ಮಹತ್ಯೆ
ಮೈಸೂರು; ಮೇ ತಿಂಗಳಲ್ಲಿ ಮದುವೆಯಾಗಿ ಆಷಾಢಕ್ಕೆ ತವರಿಗೆ ಬಂದಿದ್ದ ನವವಧು ಪ್ರಿಯಕರನೊಂದಿಗೆ ಪರಾರಿಯಾಗಿದ್ದಳು. ಇದೀಗ ಆಕೆ ಆತ್ಮಹತ್ಯೆಗೆ ಶರಣಾಗಿದ್ದಾಳೆ. ಈ ಘಟನೆ ನಡೆದಿರೋದು ಮೈಸೂರು ಜಿಲ್ಲೆ ನಂಜನಗೂಡು ತಾಲ್ಲೂಕಿನ ಕಾರ್ಯ ಗ್ರಾಮದಲ್ಲಿ. ಇಪ್ಪತ್ತು ವರ್ಷದ ವರ್ಷಿತಾ ಎಂಬಾಕೆಯೇ ಆತ್ಮಹತ್ಯೆ ಮಾಡಿಕೊಂಡ ನವವಧು.
ವರ್ಷಿತಾ ಪಕ್ಕದ ಮನೆಯ ಕಿರಣ್ ಎಂಬಾತನನ್ನು ಪ್ರೀತಿಸುತ್ತಿದ್ದಳು. ಆದ್ರೆ, ಇವರಿಬ್ಬರ ಮದುವೆಗೆ ವರ್ಷಿತಾ ಮನೆಯವರು ಒಪ್ಪಿಲ್ಲ. ಬದಲಾಗಿ ಮಗಳ ಮನವೊಲಿಸಿ ಮೇ ೮ ರಂದು ಚಾಮರಾಜನಗರದ ಅಭಿಷೇಕ್ ಎಂಬಾತನ ಜೊತೆ ಅದ್ದೂರಿಯಾಗಿ ಮದುವೆ ಮಾಡಿಸಿದ್ದರು. ಆದ್ರೆ, ಆಷಾಢಕ್ಕೆಂದು ತವರಿಗೆ ಬಂದಿದ್ದ ವರ್ಷಿತಾ, ಇದ್ದಕ್ಕಿದ್ದಂತೆ ಪಕ್ಕದ ಮನೆಯ ಪ್ರಿಯಕರ ಕಿರಣ್ ಜೊತೆ ಪರಾರಿಯಾಗಿದ್ದಳು. ಹೀಗಾಗಿ ಪೋಷಕರು ಹುಲ್ಲಹಳ್ಳಿ ಪೊಲೀಸ್ ಠಾಣೆಯಲ್ಲಿ ಕಾಣೆಯಾದ ಬಗ್ಗೆ ದೂರು ದಾಖಲಿಸಿದ್ದರು.
ಇಬ್ಬರೂ ಪ್ರೇಮಿಗಳು ಬೆಂಗಳೂರಿನಲ್ಲಿ ಸಿಕ್ಕಿಬಿದ್ದಿದ್ದರು. ಅವರನ್ನು ವಾಪಸ್ ಊರಿಗೆ ಕರೆತಂದು ಬುದ್ಧಿವಾದ ಹೇಳಿ ಇಬ್ಬರನ್ನೂ ಬೇರ್ಪಡಿಸಲಾಗಿತ್ತು. ಇದಾದ ಮೇಲೆ ವರ್ಷಿತಾ ಮೈಸೂರಿನ ಸಂಬಂಧಿಕರ ಮನೆಯಲ್ಲಿ ಮೂರು ದಿನ ಇದ್ದರು. ಅನಂತರ ರಾಂಪುರ ಗ್ರಾಮದಲ್ಲಿರುವ ತಾತನಹ ಮನೆಗೆ ಬಂದಿದ್ದರು. ಈ ವೇಳೆ ತಾತನ ಮನೆಯ ವಾಶ್ ರೂಂನಲ್ಲಿ ಆಕೆ ನೇಣಿಗೆ ಶರಣಾಗಿದ್ದಾಳೆ.