CrimeNational

ವ್ಯಕ್ತಿ ಬಳಿಯಿತ್ತು ಲಕ್ಷ ಲಕ್ಷ ನಗದು, ಮೂರು ಪಿಸ್ತೂಲ್‌, ಮೂರು ಕೆಜಿ ಬ್ರೌನ್‌ ಶುಗರ್‌..!

ಭುವನೇಶ್ವರ್:  ಒಡಿಶಾ ಪೊಲೀಸರ ವಿಶೇಷ ಕಾರ್ಯಪಡೆ (ಎಸ್‌ಟಿಎಫ್) ನಯಾಗರ್ ಜಿಲ್ಲೆಯ ಬಾಡಿಗೆ ಮನೆಯಲ್ಲಿದ್ದ ಸುಮಾರು 3 ಕೋಟಿ ರೂ ಬೆಲೆ ಬಾಳುಬ ಬ್ರೌನ್‌ ಶುಗರ್, 65 ಲಕ್ಷ‌ ರೂಪಾಯಿ ನಗದು ಮತ್ತು ಮೂರು ರಿವಾಲ್ವರ್‌, ಜೀವಂತ ಗುಂಡುಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಅಪರಾಧ ವಿಭಾಗದ ಎಡಿಜಿಪಿ ಸಂಜೀವ್ ಪಾಂಡಾ ತಿಳಿಸಿದ್ದಾರೆ.‌ ಘಟನೆ ಸಂಬಂಧ ಓರ್ವ ಆರೋಪಿಯನ್ನು ಎಸ್‌ಟಿಎಫ್‌ ಬಂಧಿಸಿದೆ. ಇನ್ನಿಬ್ಬರು ತಪ್ಪಿಸಿಕೊಂಡಿದ್ದು, ಆರೋಪಿಗಳಿಗಾಗಿ ಪೊಲೀಸರು ಬಲೆ ಬೀಸಿದ್ದಾರೆ.

ವರದಿಗಳ ಪ್ರಕಾರ ಪ್ರಮುಖ ಆರೋಪಿ ಬೇರೆ ಜಿಲ್ಲೆಯವನು ಎಂದು ಹೇಳಲಾಗಿದ್ದು, ಕಳೆದ ಕೆಲವು ತಿಂಗಳುಗಳಿಂದ ತನ್ನ ಕುಟುಂಬ ಸದಸ್ಯರೊಂದಿಗೆ ಬಾಡಿಗೆ ಮನೆಯಲ್ಲಿ ವಾಸಿಸುತತ್ತಿದ್ದಾಗಿ ಮಾಹಿತಿಯಿದೆ. ಸ್ಥಳೀಯ ಮಟ್ಟದಲ್ಲಿ  ಡ್ರಗ್ಸ್ ದಂಧೆಯಲ್ಲಿ ತೊಡಗಿದ್ದರು ಎನ್ನಲಾಗಿದೆ.

ಆರೋಪಿಗಳ ಬಾಡಿಗೆ ಮನೆ ಮೇಲೆ ಸೋಮವಾರ ಎಸ್‌ಟಿಎಫ್‌ ತಂಡ ದಾಳಿ ನಡೆಸಿ ಬರೌನ್‌ ಶುಗರ್‌, ನಗದು, ಪಿಸ್ತೂಲ್‌, ಜೀವಂತ ಗುಂಡುಗಳು ಹಾಗೂ ನಾಲ್ಕು ಮೊಬೈಲ್‌ಗಳನ್ನು ವಶಕ್ಕೆ ಪಡೆದಿದ್ದಾರೆ. ಪ್ರಕರಣದ ವಿವರಗಳನ್ನು ಬಹಿರಂಗಪಡಿಸಲು ನಿರಾಕರಿಸಿದ ಎಡಿಜಿಪಿ, ನಯಾಗಢದಿಂದ 3.1 ಕೆಜಿ ಮಾದಕ ವಸ್ತುಗಳನ್ನು ವಶಪಡಿಸಿಕೊಂಡಿರುವುದು ಜಿಲ್ಲೆಯಲ್ಲಿ ಇದೇ ಮೊದಲು ಎಂದು ಹೇಳಿದರು.

ಈ ಸಂಬಂಧ ಎನ್‌ಡಿಪಿಎಸ್ ಕಾಯ್ದೆ 1985ರ ಅಡಿ ಹಾಗೂ ಶಸ್ತ್ರಾಸ್ತ್ರ ಕಾಯ್ದೆಯಡಿ ಪ್ರಕರಣ ದಾಖಲಿಸಲಾಗಿದೆ. ಆರೋಪಿಯನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ.

2020 ರಿಂದ, ಮಾದಕ ದ್ರವ್ಯಗಳ ವಿರುದ್ಧ ವಿಶೇಷ ಅಭಿಯಾನದಲ್ಲಿ, ಎಸ್‌ಟಿಎಫ್ 47 ಕೆಜಿಗಿಂತ ಹೆಚ್ಚು ಬ್ರೌನ್ ಶುಗರ್ ಅನ್ನು ವಶಪಡಿಸಿಕೊಂಡಿದೆ ಮತ್ತು 122 ಡ್ರಗ್ ಡೀಲರ್‌ಗಳು/ಪೆಡ್ಲರ್‌ಗಳನ್ನು ಬಂಧಿಸಿದೆ. ಅಂತೆಯೇ 2020 ರಿಂದ, ಅಕ್ರಮ ಶಸ್ತ್ರಾಸ್ತ್ರಗಳ ವಿರುದ್ಧದ ಕಾರ್ಯಾಚರಣೆಯಲ್ಲಿ, STF 67 ಬಂದೂಕುಗಳನ್ನು ವಶಪಡಿಸಿಕೊಂಡಿದೆ.

Share Post