ರಜೆ ಮೇಲೆ ಮನೆಗೆ ಬಂದಿದ್ದ ಯೋಧ ಆತ್ಮಹತ್ಯೆ
ಹಾಸನ; ರಜೆ ಮೇಲೆ ಸ್ವಗ್ರಾಮಕ್ಕೆ ಬಂದಿದ್ದ ಯೋಧರೊಬ್ಬರು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಹಾಸನ ಜಿಲ್ಲೆ ಆಲೂರು ತಾಲ್ಲೂಕಿನ ಹಂಪನಗುಪ್ಪೆಯಲ್ಲಿ ನಡೆದಿದೆ. ಹರೀಶ್ ಎಂಬುವವರ ಪುತ್ರ ಯೋಗೇಶ್ ಎಂಬ ಯೋಧನೇ ಆತ್ಮಹತ್ಯೆ ಮಾಡಿಕೊಂಡಿರುವವರು. ಆದ್ರೆ ಘಟನೆಗೆ ಕಾರಣ ಮಾತ್ರ ತಿಳಿದುಬಂದಿಲ್ಲ.
ಯೋಗೇಶ್ ಅವರು ತಮ್ಮ ಕರ್ತವ್ಯಕ್ಕೆ ರಜೆ ಹಾಕಿ ಜನವರಿ 4ರಂದು ಸ್ವಗ್ರಾಮಕ್ಕೆ ಬಂದಿದ್ದರು. ಪತ್ನಿ ಹಾಗೂ ಕುಟುಂಬದವರ ಜೊತೆ ಚೆನ್ನಾಗಿಯೇ ಇದ್ದರು. ಆದ್ರೆ ಅದೇನಾಯ್ತೋ ಏನೋ ಕಳೆದ ರಾತ್ರಿ ಕೊಠಡಿಯಲ್ಲಿ ಹೋಗಿ ಮಲಗಿದವರು ಬೆಳಗ್ಗೆ ಬಾಗಿಲೇ ತೆಗೆದಿಲ್ಲ. ಅನುಮಾನ ಬಂದು ಬಾಗಿಲು ಒಡೆದು ನೋಡಿದಾಗ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವುದು ತಿಳಿದುಬಂದಿದೆ.
ಆತ್ಮಹತ್ಯೆ ಮಾಡಿಕೊಂಡ ಯೋಗೇಶ್ ಅವರು 2011ರಲ್ಲಿ ಹಾಸನದಲ್ಲಿ ನಡೆದ ಸೇನಾ ನೇಮಕಾತಿ ರ್ಯಾಲಿಯಲ್ಲಿ ಭಾಗವಹಿಸಿ ಆಯ್ಕೆಯಾಗಿದ್ದರು. ಎರಡು ವರ್ಷದ ಹಿಂದೆಯಷ್ಟೇ ಅವರ ಮದುವೆಯಾಗಿತ್ತು.