BengaluruCrimePolitics

ಸರ್ಕಾರದ ವಿರುದ್ಧ ಟೆಂಡರ್‌ ಬಾಂಬ್‌; ಟೆಂಡರ್‌ ಗೋಲ್‌ಮಾಲ್‌ ಬಿಚ್ಚಿಟ್ಟ ಕಾಂಗ್ರೆಸ್‌

ಬೆಂಗಳೂರು; ರಾಜ್ಯ ಬಿಜೆಪಿ ಸರ್ಕಾರಕ್ಕೆ ಇನ್ನು ಒಂದು ತಿಂಗಳು ಮಾತ್ರ ಬಾಕಿ ಇದೆ. ಈ ನಡುವೆ ಎಲ್ಲಾ ಇಲಾಖೆಗಳಲ್ಲೂ ತರಾತುರಿಯಲ್ಲಿ ಟೆಂಡರ್‌ ಮಾಡಲಾಗುತ್ತಿದೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌ ಆರೋಪ ಮಾಡಿದ್ದಾರೆ. ಬೆಂಗಳೂರಿನಲ್ಲಿ ಜಂಟಿ ಸುದ್ದಿಗೋಷ್ಠಿ ನಡೆಸಿದ ಅವರು, ಚುನಾವಣೆ ಹತ್ತಿರ ಬರುತ್ತಿರುವಾಗ ರಾಜ್ಯದಲ್ಲಿ ವಸೂಲಿ ದಂದೆ ಜೋರಾಗಿದೆ. ನಾವು ಅಧಿಕಾರಕ್ಕೆ ಬಂದರೆ ಆರು ತಿಂಗಳ ಹಿಂದಿನ ಟೆಂಡರ್‌ಗಳನ್ನು ರದ್ದು ಮಾಡಿಯೇ ತೀರುತ್ತೇವೆ ಎಂದು ಹೇಳಿದರು.

ಜಲಸಂಪನ್ಮೂಲ ಇಲಾಖೆ, ಆರೋಗ್ಯ ಇಲಾಖೆ, ಲೋಕೋಪಯೋಗಿ ಇಲಾಖೆ ಸೇರಿ ಬಹುತೇಕ ಇಲಾಖೆಗಳಲ್ಲಿ ತರಾತುರಿಯಲ್ಲಿ ಟೆಂಡರ್‌ ಕರೆಯಲಾಗಿದೆ. 500 ಕೋಟಿ ಟೆಂಡರ್ ಮೊತ್ತ ಇರುವ ಕಡೆ ಸಾವಿರ ಕೋಟಿ ಅಂದಾಜು ಪಟ್ಟಿ ತಯಾರಿಸ್ತಿದ್ದಾರೆ ಅಂತ ರಾಜ್ಯ ಸರ್ಕಾರದ ವಿರುದ್ಧ ಡಿ.ಕೆ.ಶಿವಕುಮಾರ್‌ ಆರೋಪ ಮಾಡಿದರು. ಮಂತ್ರಿ ಮಾಡದೇ ಇರುವವರಿಗೆ 2 ಸಾವಿರದಿಂದ ಮೂರು ಸಾವಿರ ಕೋಟಿ ರೂಪಾಯಿ ಹಂಚಿಕೆ ಮಾಡಲಾಗ್ತಿದೆ. ನಮಗೆ ಬಿಜೆಪಿ ಪಕ್ಷದ ಶಾಸಕರೇ ಮಾಹಿತಿ ಕೊಡ್ತಿದ್ದಾರೆ ಅಂತ ಡಿ.ಕೆ.ಶಿವಕುಮಾರ್‌ ನೇರ ಆರೋಪ ಮಾಡಿದ್ದಾರೆ.

ಬಿಡಿಎ ಕಾರಂತ ಬಡಾವಣೆ ಇನ್ನೂ ಹಂಚಿಕೆಯೇ ಆಗಿಲ್ಲ. ಆದ್ರೆ ಅದಕ್ಕೆ 3 ಸಾವಿರ ಕೋಟಿ ಟೆಂಡರ್ ಕರೆದಿದ್ದಾರೆ ಎಂದೂ ಡಿ.ಕೆ.ಶಿವಕುಮಾರ್‌ ಹೇಳಿದ್ದಾರೆ. ಇದೇ ವೇಳೆ ಸಿದ್ದರಾಮಯ್ಯ, ರಣದೀಪ್‌ ಸುರ್ಜೇವಾಲಾ ಉಪಸ್ಥಿತರಿದ್ದರು.

Share Post