ಹೆತ್ತವರ ಪಾಲಿಗೆ ಹೆಮ್ಮಾರಿಯಾದ ಮಗಳು, ಕೈಗೆ ಬಂದ ತುತ್ತು ಬಾಯಿಗೆ ಬರಲಿಲ್ಲ
ಕೋಲಾರ: ಹೆತ್ತು ಹೊತ್ತು, ಸಾಕಿ ಸಲಹಿ, ದೊಡ್ಡವರನ್ನಾಗಿ ಮಾಡಿ ಮದುವೆ ಮುಂಜಿ ಎಲ್ಲ ಕಾರ್ಯಗಳನ್ನು ನೆರವೇರಿಸಿ ಶಿವಾ ಅಂತ ಜೀವನ ನಡೆಸುತ್ತಿದ್ದ ವೃದ್ಧ ದಂಪತಿ ಪಾಲಿಗೆ ತಮ್ಮ ಮಗಳೇ ರಾಕ್ಷಸಿಯಾಗಿದ್ದಾಳೆ. ಈ ಇಳಿ ವಯಸ್ಸಲ್ಲೂ ಯಾರ ಹಂಗಿಗೂ ಹೋಗದೆ ಬೆಳೆ ಬೆಳೆದು ಜೀವನ ಸಾಗಿಸುತ್ತಿದ್ದ ವೃದ್ಧ ದಂಪತಿ ಕಣ್ಣೀರು ಹಾಕುವಂತೆ ಮಾಡಿದ್ದಾಳೆ.
ತನಗೆ ಆಸ್ತಿಯಲ್ಲಿ ಪಾಲು ನೀಡಿಲ್ಲ ಎಂಬ ಕಾರಣಕ್ಕೆ ಕಷ್ಟ ಪಟ್ಟು ಬೆಳೆದಿದ್ದು ರೇಷ್ಮೆ ಬೆಳೆಗೆ ವಿಷ ಹಾಕಿರುವ ಹೇಯ ಘಟನೆ ಕೋಲಾರದ ಯಳಚೀಪುರ ಗ್ರಾಮದಲ್ಲಿ ನಡೆದಿದೆ. ತಮ್ಮ ಜಮೀನಿನಲ್ಲಿ ರಾಮಣ್ಣ-ಲಕ್ಷ್ಮಮ್ಮ ಎಂಬ ವೃದ್ಧ ದಂಪತಿ ಬೆಳೆದಿದ್ದ ಬೆಳೆಗೆ ಮಗಳು ಚೌಡಮ್ಮ ಎಂಬುವವರು ವಿಷ ಸಿಂಪಡಣೆ ಮಾಡಿದ್ದಾರೆ.
ವಿಷ ಸಿಂಪಡಿಸಿದ ರೇಷ್ಮೆ ಸೊಪ್ಪನ್ನು ತಿಂದ ಚಾಕಿಯಲ್ಲಿ ರೇಷ್ಮೆ ಹುಳಗಳ ಸಾವನ್ನಪ್ಪಿವೆ. ಸುಮಾರು ಒಂದು ಲಕ್ಷ ಮೌಲ್ಯದ ಬೆಳೆ ಬಾಯಿಗೆ ಬರದಂತಾಗಿದೆ ಎಂದು ಕಣ್ಣೀರು ಹಾಕಿದ್ದಾರೆ. ಮಗಳು ಹಾಗೂ ಅಳಿಯನ ವಿರುದ್ಧ ವೃದ್ಧ ದಂಪತಿ ಕೋಲಾರ ಗ್ರಾಮಾಂತರ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
ಯಾರ ಹಂಗಿಗೂ ಹೋಗದೆ ಕೈಲಾಗದ ವಯಸ್ಸಲ್ಲೂ ಬೆವರು ಸುರಿಸಿ ಬೆಳೆದ ಬೆಳೆ ಕಳೆದುಕೊಂಡು ವೃದ್ಧ ದಂಪತಿ ಕಂಗಾಲಾಗಿದ್ದಾರೆ. ಘಟನೆ ಸಂಬಂಧ ಕೋಲಾರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.