CrimeNationalPolitics

ರಾಹುಲ್‌ ಗಾಂಧಿಗೆ ಸಂಕಷ್ಟ; ಜೈಲು ಶಿಕ್ಷೆ ಎತ್ತಿ ಹಿಡಿದ ಸೆಷನ್ಸ್‌ ಕೋರ್ಟ್‌

ಅಹಮದಾಬಾದ್‌; 2019ರಲ್ಲಿ ಕೋಲಾರದಲ್ಲಿ ಮಾಡಿದ್ದ ಭಾಷಣ ಸಂಬಂಧ ಹೂಡಿದ್ದ ಮಾನನಷ್ಟ ಕೇಸ್‌ನಲ್ಲಿ ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿಗೆ ಸಂಕಷ್ಟ ಎದುರಾಗಿದೆ. ಮಾರ್ಚ್‌ 31ರಂದು ಸೂರತ್‌ ಕೋರ್ಟ್‌ ವಿಧಿಸಿದ್ದ ಎರಡು ವರ್ಷ ಜೈಲು ಶಿಕ್ಷೆಯನ್ನು ಸೂರತ್‌ ಸೆಷನ್ಸ್‌ ಕೋರ್ಟ್‌ ಎತ್ತಿಹಿಡಿದೆ. ಎರಡೂ ಕಡೆಯ ವಾದಗಳನ್ನು ಆಲಿಸಿದ್ದ ಹೆಚ್ಚುವರಿ ಸೆಷನ್ಸ್ ನ್ಯಾಯಾಧೀಶ ಆರ್. ಪಿ. ಮೊಗೇರ ಅವರು ಇಂದು ರಾಹುಲ್‌ ಅರ್ಜಿಯನ್ನು ವಜಾಗೊಳಿಸಿ ಜೈಲು ಶಿಕ್ಷೆಯನ್ನು ಎತ್ತಿ ಹಿಡಿದಿದ್ದಾರೆ. ಈ ಹಿನ್ನೆಲೆಯಲ್ಲಿ ರಾಹುಲ್‌ ಗಾಂಧಿ ಜೈಲು ಸೇರಬೇಕಾದ ಅನಿವಾರ್ಯತೆ ಎದುರಾಗಿದೆ.

ಮೋದಿ ಉಪನಾಮವಿರುವವರೆಲ್ಲರೂ ಕಳ್ಳರೇ ಆಗಿದ್ದಾರೆ ಎಂದು ರಾಹುಲ್‌ ಗಾಂಧಿಯವರು ಕೋಲಾರದಲ್ಲಿ ನಡೆದ ಬಹಿರಂಗ ಸಭೆಯಲ್ಲಿ ಹೇಳಿದ್ದರು. ಹೀಗಾಗಿ ತಮಗೆ ಮಾನನಷ್ಟವಾಗಿದೆ ಎಂದು ಹುಜರಾತ್‌ನ ಬಿಜೆಪಿ ಶಾಸಕ ಪೂರ್ಣೇಶ್‌ ಮೋದಿ ಸೂರತ್‌ ಕೋರ್ಟ್‌ನಲ್ಲಿ ಕೇಸ್‌ ದಾಖಲಿಸಿದ್ದರು. ವಿಚಾರಣೆ ನಡೆಸಿದ್ದ ಕೋರ್ಟ್‌ ರಾಹುಲ್‌ ಗಾಂಧಿಗೆ ಎರಡು ವರ್ಷ ಜೈಲು ಶಿಕ್ಷೆ ವಿಧಿಸಿದೆ. ಆದ್ರೆ ಒಂದು ತಿಂಗಳು ಮೇಲ್ಮನವಿಗೆ ಅವಕಾಶ ನೀಡಿ, ಮಧ್ಯಂತರ ಜಾಮೀನು ಕೂಡಾ ಮಂಜೂರು ಮಾಡಿತ್ತು. ಆದ್ರೆ ಕೋರ್ಟ್‌ ನೀಡಿದ್ದ ಗಡುವು ಇನ್ನು ಮೂರು ದಿನದಲ್ಲಿ ಮುಗಿಯುತ್ತದೆ. ಅಷ್ಟರೊಳಗೆ ರಾಹುಲ್‌ ಗಾಂಧಿಯವರು ಸೂರತ್‌ ಕೋರ್ಟ್‌ ತೀರ್ಪಿಗೆ ತಡೆ ತರದಿದ್ದರೆ, ಜೈಲಿಗೆ ಹೋಗುವ ಅನಿವಾರ್ಯತೆ ಇದೆ.

ಎರಡು ಅಥವಾ ಎರಡು ವರ್ಷಕ್ಕಿಂತ ಹೆಚ್ಚು ಶಿಕ್ಷೆಗೊಳಗಾಗಿದ್ದ ಕಾರಣಕ್ಕಾಗಿ ರಾಹುಲ್‌ ಗಾಂಧಿ ಸಂಸತ್‌ ಸ್ಥಾನದಿಂದಲೂ ಅನರ್ಹಗೊಂಡಿದ್ದಾರೆ. ಒಂದು ವೇಳೆ ಸೆಷನ್ಸ್‌ ಕೋರ್ಟ್‌, ಸೂರತ್‌ ಕೋರ್ಟ್‌ ತೀರ್ಪಿಗೆ ತಡೆ ನೀಡಿದ್ದರೆ, ಸಂಸತ್‌ ಸದಸ್ಯ ಸ್ಥಾನವೂ ಉಳಿಯುತ್ತಿತ್ತು. ಆದ್ರೆ, ರಾಹುಲ್‌ ಅನರ್ಹತೆ ಈಗಲೂ ಮುಂದುವರೆದಿದೆ. ಜೊತೆಗೆ ಜೈಲಿಗೆ ಹೋಗಬೇಕಾಗಿ ಬಂದಿದೆ.

Share Post