ಒಕ್ಕಲಿಗ ಮತಗಳ ಮೇಲೆ ಎಲ್ಲರ ಕಣ್ಣು; ಹಳೇ ಮೈಸೂರು ಭಾಗಕ್ಕಾಗಿ ಯಾಕಿಷ್ಟು ಫೈಟ್..?
ಬೆಂಗಳೂರು; ಹಳೇ ಮೈಸೂರು ಭಾಗದಲ್ಲಿ ಒಕ್ಕಲಿಗರ ಪ್ರಾಬಲ್ಯ ಹೆಚ್ಚಿದೆ. ಒಕ್ಕಲಿಗರ ಪ್ರಾಬಲ್ಯ ಹೆಚ್ಚಿರುವ ಕಡೆ ಜೆಡಿಎಸ್ ಪ್ರಾಬಲ್ಯ ಹೊಂದಿದೆ. ಜೊತೆಗೆ ಅಲ್ಲಲ್ಲಿ ಕಾಂಗ್ರೆಸ್ ಕೂಡಾ ತನ್ನ ಪ್ರಾಬಲ್ಯ ಮೆರೆದಿದೆ. ಆದ್ರೆ ಈ ಬೆಲ್ಟ್‌ನಲ್ಲಿ ಬಿಜೆಪಿಗೆ ಅಷ್ಟೊಂದು ಬಲ ಇಲ್ಲ. ಆದ್ರೆ ಈ ಬಾರಿ ಒಕ್ಕಲಿಗರ ಮನ ಗೆಲ್ಲೋದಕ್ಕೆ ಬಿಜೆಪಿ ಸಾಕಷ್ಟು ಸರ್ಕಸ್ ಮಾಡುತ್ತಿದೆ. ಹಳೇ ಮೈಸೂರು ಭಾಗದಲ್ಲಿ ಒಕ್ಕಲಿಗ ನಾಯಕರನ್ನು ಸೆಳೆದು ಬಿಜೆಪಿಯನ್ನು ಬಲಿಷ್ಠ ಮಾಡೋದಕ್ಕೆ ಬಿಜೆಪಿ ಈ ಬಾರಿ ಹೆಚ್ಚಿನ ಆಸಕ್ತಿ ವಹಿಸಿದೆ.
ಅಂದಹಾಗೆ ಮೂರೂ ಪಕ್ಷಗಳು ಒಕ್ಕಲಿಗರ ಮತಗಳಿಗಾಗಿ ಸರ್ಕಸ್ ಮಾಡೋದಕ್ಕೆ ಕಾರಣಗಳೂ ಇಲ್ಲದಿಲ್ಲ. ಯಾಕಂದ್ರೆ ಶೇಕವಾರು ಮತಗಳನ್ನು ನೋಡಿದರೆ ಲಿಂಗಾಯತರನ್ನು ಬಿಟ್ಟರೆ ನಂತರ ಸ್ಥಾನದಲ್ಲಿ ಒಕ್ಕಲಿಗರೇ ಇದ್ದಾರೆ. ರಾಜ್ಯದಲ್ಲಿ ಶೇ.15ರಷ್ಟು ಒಕ್ಕಲಿಗರ ಮತಗಳಿವೆ. ಲಿಂಗಾಯತರು ಶೇಕಡಾ 17ರಷ್ಟಿದ್ದಾರೆ. ಅಂದರೆ ಲಿಂಗಾಯತರಿಗಿಂತ ಕೇಲವ ಶೇಕಡಾ 2 ರಷ್ಟು ಕಡಿಮೆ ಇದ್ದಾರೆ. ಹೀಗಾಗಿ, ರಾಜ್ಯದಲ್ಲಿ ಒಕ್ಕಲಿಗರು ಕೂಡಾ ನಿರ್ಣಾಯಕರಾಗಿತ್ತಾರೆ. ಅಲ್ಲದೆ ಮೊದಲಿನಿಂದಲೂ ರಾಜಕೀಯದಲ್ಲಿ ಒಕ್ಕಲಿಗರು ಪ್ರಾಬಲ್ಯ ಮೆರೆಯುತ್ತಲೇ ಬಂದಿದ್ದಾರೆ. ರಾಜ್ಯದಲ್ಲಿ ಇದುವರೆಗೂ 17 ಮುಖ್ಯಮಂತ್ರಿಗಳಾಗಿದ್ದರೆ ಅದ್ರಲ್ಲಿ 7 ಮಂದಿ ಒಕ್ಕಲಿಗರೇ ಆಗಿರೋದು ನೋಡಿದರೆ ಒಕ್ಕಲಿಗರ ಪ್ರಾಬಲ್ಯ ಎಷ್ಟಿದೆ ಅನ್ನೋದು ಅರ್ಥವಾಗುತ್ತದೆ. ಜೊತೆಗೆ ರಾಜ್ಯದಿಂದ ಪ್ರಧಾನಿ ಹುದ್ದೆಯೇರಿದ ಏಕೈಕ ನಾಯಕ ದೇವೇಗೌಡರು ಕೂಡಾ ಒಕ್ಕಲಿಗರೇ.
ರಾಜ್ಯ ಸ್ಥಾಪನೆಯಾದ ಮೇಲೆ ಮೊದಲ ಮೂವರು ಮುಖ್ಯಮಂತ್ರಿ ಒಕ್ಕಲಿಗರೇ ಆಗಿದ್ದರು. ಮೊದಲ ಮುಖ್ಯಮಂತ್ರಿ ಕೆ.ಚೆಂಗಲರಾಯರೆಡ್ಡಿ, ಎರಡನೆಯವರು ಕೆಂಗಲ್ ಹನುಮಂತಯ್ಯನವರು, ಮೂರನೆಯವರು ಕಡಿದಾಳ್ ಮಂಜಪ್ಪನವರು. ಈ ಮೂವರೂ ಒಕ್ಕಲಿಗರೇ. ಇವರಲ್ಲದೆ ದೇವೇಗೌಡರು, ಕುಮಾರಸ್ವಾಮಿ, ಸದಾನಂದಗೌಡರು, ಎಸ್.ಎಂ.ಕೃಷ್ಣ, ಕುಮಾರಸ್ವಾಮಿ ಹೀಗೆ ಏಳು ಮಂದಿ ಒಕ್ಕಲಿಗರು ಮುಖ್ಯಮಂತ್ರಿಗಳಾಗಿದ್ದರು.
ರಾಮನಗರ, ಮಂಡ್ಯ, ಮೈಸೂರು, ಚಾಮರಾಜನಗರ, ಕೊಡಗು, ಕೋಲಾರ, ತುಮಕೂರು, ಚಿಕ್ಕಬಳ್ಳಾಪುರ ಹಾಗೂ ಹಾಸನ ಜಿಲ್ಲೆಗಳಲ್ಲಿ ಒಕ್ಕಲಿಗರ ಪ್ರಾಬಲ್ಯ ಹೆಚ್ಚಿದೆ. ಈ ಜಿಲ್ಲೆಗಳಲ್ಲಿ ಒಕ್ಕಲಿಗರ ಮತಗಳೇ ನಿರ್ಣಾಯಕ. ಪ್ರಸ್ತುತ ವಿಧಾನಸಭೆಯಲ್ಲಿ ಜೆಡಿಎಸ್‌ನಲ್ಲಿ 24 ಒಕ್ಕಲಿಗರ ಶಾಸಕರಿದ್ದಾರೆ. ಕಾಂಗ್ರೆಸ್‌ನಲ್ಲಿ 18 ಹಾಗೂ ಬಿಜೆಪಿಯಲ್ಲಿ 15 ಒಕ್ಕಲಿಗ ಶಾಸಕರಿದ್ದಾರೆ. ಬೆಂಗಳೂರು ನಗರ ಜಿಲ್ಲೆಯಲ್ಲೂ ಕೆಲ ಕ್ಷೇತ್ರಗಳಲ್ಲಿ ಒಕ್ಕಲಿಗರ ಪ್ರಾಬಲ್ಯವಿದೆ.
ಈಗಲೂ ಕೂಡಾ ಎಲ್ಲಾ ಪಕ್ಷಗಳಲ್ಲೂ ಒಕ್ಕಲಿಗ ಮುಖಂಡರಿದ್ದಾರೆ. ಸಿಎಂ ಸ್ಥಾನಕ್ಕೆ ಪೈಪೋಟಿ ನೀಡುವ ಶಕ್ತಿ ಇರುವ ನಾಯಕರಿದ್ದಾರೆ. ಕಾಂಗ್ರೆಸ್‌ನಲ್ಲಿ ಡಿ.ಕೆ.ಶಿವಕುಮಾರ್ ಕೆಪಿಸಿಸಿ ಅಧ್ಯಕ್ಷರಾಗಿದ್ದಾರೆ. ಮುಖ್ಯಮಂತ್ರಿ ಸ್ಥಾನದ ಆಕಾಂಕ್ಷಿಗಳಲ್ಲಿ ಅವರೂ ಪ್ರಮುಖರು. ಇನ್ನು ಬಿಜೆಪಿಯಲ್ಲಿ ಆರ್.ಅಶೋಕ್, ಅಶ್ವತ್ಥನಾರಾಯಣ, ಸುಧಾಕರ್ ಸೇರಿದಂತೆ ಹಲವು ಪ್ರಮುಖ ಒಕ್ಕಲಿಗ ನಾಯಕರಿದ್ದಾರೆ. ಜೆಡಿಎಸ್‌ನಲ್ಲಿ ಇಡೀ ದೇವೇಗೌಡರ ಕುಟುಂಬವೇ ರಾಜಕೀಯದಲ್ಲಿ ತೊಡಗಿಸಿಕೊಂಡಿದೆ. ಜೊತೆಗೆ ಜೆಡಿಎಸ್ ಅತಿಹೆಚ್ಚು ಜೆಡಿಎಸ್ ನಾಯಕರನ್ನು ಕಣಕ್ಕಿಳಿಸಿದೆ ಕೂಡಾ.