ಪ್ರಶ್ನೆಪತ್ರಿಕೆ ಸೋರಿಕೆ ಪ್ರಕರಣ; ಬಿಜೆಪಿ ಅಧ್ಯಕ್ಷ ಬಂಡಿ ಸಂಜಯ್ ಅರೆಸ್ಟ್
ಹೈದರಾಬಾದ್; ತೆಲಂಗಾಣದಲ್ಲಿ ಹತ್ತನೇ ತರಗತಿ ಹಿಂದಿ ಪರೀಕ್ಷೆ ಪ್ರಶ್ನೆಪತ್ರಿಕೆ ಸೋರಿಕೆಯಾಗಿ ದೊಡ್ಡ ಸುದ್ದಿಯಾಗಿತ್ತು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ತೆಲಂಗಾಣ ಬಿಜೆಪಿ ಅಧ್ಯಕ್ಷ ಬಂಡಿ ಸಂಜಯ್ ಅವರನ್ನು ಬಂಧಿಸಲಾಗಿದೆ. ಕರೀಂನಗರದ ನಿವಾಸದಲ್ಲಿ ಬಂಡಿ ಸಂಜಯ್ ಅವರನ್ನು ಬಂಧಿಸಲಾಗಿದೆ. ಈ ವೇಳೆ ಅವರ ಬೆಂಬಲಿಗರು ಪ್ರತಿಭಟನೆ ನಡೆಸಿದ್ದಾರೆ. ಅವರನ್ನು ಬಂಧಿಸದಂತೆ ಆಗ್ರಹಿಸಿದರು. ಆದ್ರೆ ಪೊಲೀಸರು, ಬಂಡಿ ಸಂಜಯ್ ಅವರನ್ನು ಬಲವಂತವಾಗಿ ಬಂಧಿಸಿ ಕರೆದೊಯ್ದಿದ್ದಾರೆ.
ಸೋಮವಾರ ಬೆಳಗ್ಗೆ ಹತ್ತನೇ ತರಗತಿ ಹಿಂದಿ ಪರೀಕ್ಷೆ ಆರಂಭಕ್ಕೂ ಮೊದಲೇ ಪ್ರಶ್ನೆಪತ್ರಿಕೆ ಲೀಕ್ ಆಗಿತ್ತು. ವಾಟ್ಸಾಪ್ ಗ್ರೂಪ್ಗಳಲ್ಲಿ ಪ್ರಶ್ನೆ ಪತ್ರಿಕೆ ಹರಿದಾಡಿತ್ತು. ಮೊದಲಿಗೆ ವಾರಂಗಲ್ ಜಿಲ್ಲೆಯಲ್ಲಿ ಈ ಪ್ರಶ್ನೆಪತ್ರಿಕೆ ಲೀಕ್ ಆಗಿತ್ತು. ಹನುಮಕೊಂಡದ ಕಮಲಾಪುರದ ಪರೀಕ್ಷಾ ಕೇಂದ್ರದಲ್ಲಿ ಪ್ರಶ್ನೆಪತ್ರಿಕೆ ಸೋರಿಕೆಯಾಗಿದೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ. ಇದರಲ್ಲಿ ಬಂಡಿ ಸಂಜಯ್ ಕುಮಾರ್ ಅವರು ನೇರವಾಗಿ ಭಾಗಿಯಾಗಿದ್ದಾರೆಂಬ ಆರೋಪ ಕೇಳಿಬರುತ್ತಿದೆ. ಈ ಹಿನ್ನೆಲೆಯಲ್ಲಿ ಪೊಲೀಸರು ಅವರನ್ನು ಬಂಧಿಸಿದ್ದಾರೆ.
ಇನ್ನು ಪ್ರಧಾನಿ ಮೋದಿಯವರು ಏಪ್ರಿಲ್ 8ರಂದು ತೆಲಂಗಾಣದಲ್ಲಿ ಬರಲಿದ್ದಾರೆ. ಸಿಕಂದರಾಬಾದ್ ಟು ತಿರುಪತಿ ಮಾರ್ಗದ ವಂದೇ ಭಾರತ್ ಎಕ್ಸ್ಪ್ರೆಸ್ ರೈಲನ್ನು ಉದ್ಘಾಟಿಸಲಿದ್ದಾರೆ. ಇದಕ್ಕೆ ಅಡ್ಡಿಪಡಿಸಲೆಂದೇ ಬಿಆರ್ಎಸ್ ನೇತೃತ್ವದ ಸರ್ಕಾರ ಬಂಡಿ ಸಂಜಯ್ ಅವರನ್ನು ಬಂಧಿಸಿದೆ ಎಂದು ಬಿಜೆಪಿ ಆರೋಪ ಮಾಡಿದೆ.