ಗುಂಡು ಹಾರಿಸಿ ದರೋಡೆಕೋರರ ಬಂಧಿಸಿದ ಕಲಬುರಗಿ ಪೊಲೀಸರು
ಕಲಬುರಗಿ; ಕಲಬುರಗಿ ನಗರದಲ್ಲಿ ಗುಂಡು ಹಾರಿಸಿ ಇಬ್ಬರು ಅಂತಾರಾಜ್ಯ ದರೋಡೆಕೋರರನ್ನು ಪೊಲೀಸರು ಬಂಧಿಸಿದ್ದಾರೆ. ಬಂಧಿತ ಇಬ್ಬರೂ ಆರೋಪಿಗಳು ಮಹಾರಾಷ್ಟ್ರ ಮೂಲದವರು ಎಂದು ತಿಳಿದುಬಂದಿದೆ. ಇಬ್ಬರ ಕಾಲಿಗೆ ಗುಂಡು ತಾಗಿದ್ದರಿಂದ ಗಾಯವಾಗಿದ್ದು ಇಬ್ಬರನ್ನೂ ಆಸ್ಪತ್ರೆಗೆ ದಾಖಲಿಸಲಾಗಿದೆ. ಉಳಿದಿಬ್ಬರನ್ನು ಕೂಡಾ ಪೊಲೀಸರು ಬಂಧಿಸಿದ್ದಾರೆ.
ಮಹಾರಾಷ್ಟ್ರದ ಉಸ್ಮಾನಾಬಾದ್ ಜಿಲ್ಲೆಯ ತುಳಜಾಪೂರ ತಾಲೂಕಿನ ಝಳಕೋಳ ಗ್ರಾಮದ ಲವ ಮತ್ತು ದೇವಿದಾಸ ಪೊಲೀಸರ ಗುಂಡೇಟಿನಿಂದ ಗಾಯಗೊಂಡಿರುವವರು. ಇಬ್ಬರನ್ನು ನಗರದ ಜಿಲ್ಲಾ ಸರ್ಕಾರಿ ಆಸ್ಪತ್ರೆಯ ಕೈದಿಗಳ ವಾರ್ಡ್ನಲ್ಲಿ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಕಾರ್ಯಾಚರಣೆ ವೇಳೆ ಗಾಯಗೊಂಡ ಅಶೋಕ್ ನಗರ ಠಾಣೆಯ ಕಾನ್ಸ್ಟೇಬಲ್ ಶಿವಶರಣಪ್ಪ ಅವರನ್ನು ಬಸವೇಶ್ವರ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.
ಆರೋಪಿಗಳು ಹಗಲು ದೇವರ ಪ್ರತಿಮೆ ಹೊತ್ತು ಗಲ್ಲಿ ಗಲ್ಲಿ ಸುತ್ತಾಟ ಮಾಡಿ ರಾತ್ರಿ ದರೋಡೆಗೆ ಇಳಿಯುತ್ತಿದ್ದರು. ಇತ್ತೀಚಿಗೆ ನಗರದಲ್ಲಿ ಮನೆಗಳ್ಳತನ ಹೆಚ್ಚಾದರಿಂದ ಸಾರ್ವಜನಿಕರು ರೋಸಿ ಹೋಗಿದ್ದರು. ಕಳ್ಳರ ಕೃತ್ಯ ಪೊಲೀಸರಿಗೆ ತಲೆ ನೋವಾಗಿ ಪರಿಣಮಿಸಿತ್ತು.