ಇಸ್ಪೀಟ್ ಜೂಜು ಆಡಿ ಸಿಕ್ಕಿಬಿದ್ದ ನಗರಸಭಾ ಸದಸ್ಯರು!
ಚಿತ್ರದುರ್ಗ; ಇಸ್ಪೀಟ್‌ನಂತಹ ಜೂಜು ಆಡೋದು ಕಾನೂನು ಬಾಹಿರ. ಆಡಿ ಸಿಕ್ಕಿಬಿದ್ದರೆ ಶಿಕ್ಷೆಯಾಗುತ್ತೆ ಅನ್ನೋದು ಎಲ್ಲರಿಗೂ ಗೊತ್ತಿದೆ. ಆದರೂ, ಹಲವಾರು ಕಡೆ ಇಂತಹ ಜೂಜು ಅಡ್ಡೆಗಳ ನಡೆಯುತ್ತಲೇ ಇವೆ. ಅದರಲ್ಲೂ ಕೆಲ ರಾಜಕಾರಣಿಗಳು, ಸರ್ಕಾರಿ ಕಟ್ಟಡಗಳಲ್ಲೇ ಇಸ್ಪೀಟ್ ಆಡುತ್ತಾರೆ. ಹೀಗೆ ಐಬಿಯನ್ನೇ ಜೂಜು ಅಡ್ಡೆ ಮಾಡಿಕೊಂಡಿದ್ದ ನಗರಸಭಾ ಸದಸ್ಯರು ರೆಡ್ ಹ್ಯಾಂಡಾಗಿ ಸಿಕ್ಕಿಬಿದ್ದಿದ್ದಾರೆ. ಅವರ ಜೊತೆಗೆ ಇನ್ನೂ 13 ಮಂದಿಯನ್ನು ಬಂದಿಸಲಾಗಿದೆ. ಚಿತ್ರದುರ್ಗ ಜಿಲ್ಲೆ ಹಿರಿಯೂರು ಗ್ರಾಮಾಂತರ ಠಾಣೆ ಪೊಲೀಸರು ಈ ಕಾರ್ಯಾಚರಣೆ ನಡೆಸಿದ್ದಾರೆ.
ಹಿರಿಯೂರು ವಾಣಿವಿಲಾಸ ಸಾಗರ ಜಲಾಶಯದ ಬಳಿ ಐಬಿ ಒಂದಿದೆ. ಇದರಲ್ಲೇ ಇಸ್ಪೀಟ್ ಜೂಜು ಆಡಲಾಗುತ್ತಿತ್ತು. ಇದೇ ವೇಳೆ ಪೊಲೀಸರು ದಾಳಿ ನಡೆಸಿದ್ದಾರೆ. ನಗರಸಭೆ ಸದಸ್ಯರಾದ ಜಗದೀಶ್, ಅಜಯ್ ಕುಮಾರ್ ಮತ್ತು ಅನಿಲ್ ಕುಮಾರ್ ನೇತೃತ್ವದಲ್ಲಿ ಈ ಜೂಜು ಅಡ್ಡೆ ನಡೆಯುತ್ತಿತ್ತು ಎಂದು ತಿಳಿದುಬಂದಿದೆ. ಇವರೆಲ್ಲಾ ಜಿಲ್ಲಾ ಉಸ್ತುವಾರಿ ಸಚಿವ ಡಿ.ಸುಧಾಕರ್ ಬೆಂಬಲಿಗರು ಎಂದು ಹೇಳಲಾಗಿದೆ.
ಬಂಧಿತರಿಂದ 4 ಲಕ್ಷದ 37 ಸಾವಿರ ರೂಪಾಯಿ ನಗದನ್ನು ವಶಪಡಿಸಿಕೊಳ್ಳಲಾಗಿದೆ. ನಗರಸಭೆ ಸದಸ್ಯ ಜಗದೀಶ್ ಸೇರಿದಂತೆ 14 ಜನರನ್ನು ಬಂಧಿಸಲಾಗಿದೆ. ಮತ್ತಿಬ್ಬರು ನಗರಸಭಾ ಸದಸ್ಯರಾದ ಅನಿಲ್ ಕುಮಾರ್ ಹಾಗೂ ಅಜ್ಜಪ್ಪ ಪರಾರಿಯಾಗಿದ್ದಾರೆಂದು ತಿಳಿದುಬಂದಿದೆ.