ಪ್ಲಾಸ್ಟಿಕ್ ತ್ಯಾಜ್ಯ ಸೇವಿಸಿ 30ಕ್ಕೂ ಹೆಚ್ಚು ಹಸುಗಳು ಸಾವು: ಪಾದಯಾತ್ರಿಗಳ ನಿರ್ಲಕ್ಷ್ಯಕ್ಕೆ ಸ್ಥಳೀಯರು ಆಕ್ರೋಶ
ಚಿಕ್ಕಮಗಳೂರು: ಪ್ರತಿವರ್ಷ ಶಿವರಾತ್ರಿ ಹಬ್ಬದ ವೇಳೆ ಭಕ್ತರು ಶಿವನ ದರ್ಶನಕ್ಕಾಗಿ ಧರ್ಮಸ್ಥಳಕ್ಕೆ ಪಾದಯಾತ್ರೆ ಬೆಳೆಸುತ್ತಾರೆ. ರಾಜ್ಯಾದ್ಯಂತ ಜನರು ಪಾದಯಾತ್ರೆ ನಡೆಸುತ್ತಾರೆ. ಒಂದು ವಾರಗಳ ಮಟ್ಟಿಗೆ ಸಾಗುವ ಪಾದಯಾತ್ರೆಯಲ್ಲಿ ಜನ ಊಟೋಪಚಾರಕ್ಕಾಗಿ ಬಳಸಿರುವ ತ್ಯಾಜ್ಯ ತಿಂದು ಮೂವತ್ತಕ್ಕೂ ಹೆಚ್ಚು ಜಾನುವಾರುಗಳು ಸಾವನ್ನಪ್ಪಿರುವ ದಾರುಣ ಘಟನೆ ಮೂಡಿಗೆರೆ ತಾಲೂಕಿನ ಸುತ್ತಮುತ್ತ ನಡೆದಿದೆ.
ಶಿವನ ದರ್ಶನಕ್ಕಾಗಿ ಪ್ರತಿವರ್ಷ ಶಿವರಾತ್ರಿ ಸಂದರ್ಭದಲ್ಲಿ ಜನ ಪವಿತ್ರ ಕ್ಷೇತ್ರ ಧರ್ಮಸ್ಥಳಕ್ಕೆ ಪಾದಯಾತ್ರೆ ನಡೆಸುವುದು ಸರ್ವೆಸಾಮಾನ್ಯ ಈ ವೇಳೆ ಲಕ್ಷಾಂತರ ಮಂದಿ ಭಕ್ತರು ಚಿಕ್ಕಮಗಳೂರಿನ ಮೂಡಿಗೆರೆ ಮೂಲಕ ಹಾದು ಹೋಗುತ್ತಾರೆ. ಮುಂದೆ ಚಾರ್ಮಾಡಿ ಘಾಟ್ ರಸ್ತೆ ಪ್ರಾರಂಭವಾಗುವ ಕಾರಣದಿಂದಾಗಿ ಭಕ್ತರು ಮೂಡಿಗೆರೆ ಸುತ್ತಮುತ್ತ ಟೆಂಟ್‌ಗಳನ್ನು ಹಾಕಿ ವಿಶ್ರಾಂತಿ ಪಡೆದು ಮುಂದೆ ಸಾಗುತ್ತಾರೆ. ಈ ವೇಳೆ ಅವರ ಹಸಿವು, ದಣಿವು ನೀಗಿಸಿಕೊಳ್ಳಲು ತಾವು ತಂದ ಆಹಾರ ಪದಾರ್ಥಗಳನ್ನು ಬಳಸಿ ಅಡುಗೆ ಮಾಡಿ ಊಟ ಮಾಡ್ತಾರೆ. ಇನ್ನೂ ಕೆಲವರಿಗೆ ಸ್ಥಳೀಯರು ಹಾಗೂ ಕೆಲವು ಸಂಘ ಸಂಸ್ಥೆಗಳು ಸಹಾಯ ಮಾಡಿ ಭಕ್ತರ ಹಸಿವನ್ನು ನೀಗಿಸುತ್ತಾರೆ.
ಹೀಗೆ ಮಾಡುದವರು ಉಳಿದ ಆಹಾರ ಪದಾರ್ಥಗಳ ತ್ಯಾಜ್ಯವನ್ನು ಎಲ್ಲೆಂದರಲ್ಲೆ ಬಿಸಾಡುತ್ತಾರೆ. ಹೀಗೆ ಬಿಸಾಡಿದ ಹಳಸಿದ ಅನ್ನ, ಪ್ಲಾಸ್ಟಿಕ್ ಸೇವಿಸಿ ಮೂಡಿಗೆರೆ ಸುತ್ತಮುತ್ತ ಮೂವತ್ತಕ್ಕೂ ಹೆಚ್ಚು ಹಸುಗಳು ಸಾವನ್ನಪ್ಪಿವೆ ಎಂದು ಮಾಲೀಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಜಿಲ್ಲಾಡಳಿತ ಈ ಬಗ್ಗೆ ಗಮನ ಹರಿಸಿ ತ್ಯಾಜ್ಯ ವಿಲೇವಾರಿಗೆ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಸ್ಥಳೀಯರು ಒತ್ತಾಯಿಸಿದ್ದಾರೆ. ಹಾಲು ಕೊಡುವ ಹಸುಗಳನ್ನು ಕಳೆದುಕೊಂಡು ಪರಿಹಾರಕ್ಕಾಗಿ ಜಿಲ್ಲಾಡಳಿತದ ಮೊರೆ ಹೋಗಿದ್ದಾರೆ ಮಾಲೀಕರು.