ಮಾಜಿ ಕ್ರಿಕೆಟಿಗ ಗೌತಮ್ ಗಂಭೀರ್‌ಗೆ ಉಗ್ರರಿಂದ ಜೀವ ಬೆದರಿಕೆ..!
ದೆಹಲಿಯ ಬಿಜೆಪಿ ಸಂಸದ ಹಾಗೂ ಟೀಂ ಇಂಡಿಯಾ ಮಾಜಿ ಆಟಗಾರ ಗೌತಮ್ ಗಂಭೀರ್ ಅವರಿಗೆ ಐಸಿಸ್ ಉಗ್ರರು ಜೀವ ಬೆದರಿಕೆ ಹಾಕಿದ್ದಾರೆ. ಕಾಶ್ಮೀರ್ ಐಸಿಸ್ ಹೆಸರಿನಲ್ಲಿ ಗೌತಮ್ ಗಂಭೀರ್ ಅವರಿಗೆ ಇ-ಮೇಲ್ ಸಂದೇಶ ಬಂದಿದ್ದು, ಕೊಲೆ ಮಾಡುತ್ತೇವೆ ಎಂದು ಉಗ್ರರು ಬೆದರಿಕೆ ಹಾಕಿದ್ದಾರೆ ಎನ್ನಲಾಗಿದೆ. ಈ ಹಿನ್ನೆಲೆಯಲ್ಲಿ ಪೂರ್ವ ದೆಹಲಿ ಸಂಸದರಾಗಿರುವ ಗೌತಮ್ ಗಂಭೀರ್ ಅವರು, ರಕ್ಷಣೆಗಾಗಿ ಪೊಲೀಸರ ಮೊರೆ ಹೋಗಿದ್ದಾರೆ. ಈ ಸಂಬಂಧ ದೆಹಲಿ ಪೊಲೀಸರು ಗೌತಮ್ ಗಂಭೀರ್‌ಗೆ ಹೆಚ್ಚುವರಿ ಭದ್ರತೆ ಒದಗಿಸಿದ್ದಾರೆ.
ಮಂಗಳವಾರ ಸಂಜೆ ಗೌತಮ್ ಗಂಭೀರ್ ಅವರಿಗೆ ಇ-ಮೇಲ್ ಸಂದೇಶ ಬಂದಿದೆ ಎಂದು ತಿಳಿದುಬಂದಿದೆ. ಸಂಸದ ಅಧಿಕೃತ ಇ-ಮೇಲ್ ಐಡಿಗೆ ಈ ಸಂದೇಶ ಬಂದಿದ್ದು, ಗೌತಮ್ ಗಂಭೀರ್ ಹಾಗೂ ಅವರ ಕುಟುಂಬದವರನ್ನು ಕೊಲೆ ಮಾಡುತ್ತೇವೆಂದು ಅದರಲ್ಲಿ ಬೆದರಿಕೆ ಹಾಕಲಾಗಿದೆ.
ಟೀಂ ಇಂಡಿಯಾ ಎಡಗೈ ಬ್ಯಾಟ್ಸ್‌ಮನ್ ಆಗಿದ್ದ ಗೌತಮ್ ಗಂಭೀರ್, ಸದ್ಯ ರಾಜಕಾರಣದಲ್ಲಿ ತೊಡಗಿಸಿದ್ದಾರೆ. ಇವರು ಗಡಿಯಲ್ಲಿ ನಡೆಯುತ್ತಿರುವ ಪಾಕ್ ಪ್ರಚೋದಿತ ಭಯೋತ್ಪಾದನೆ ವಿರುದ್ಧ ಧ್ವನಿ ಎತ್ತಿದ್ದರು. ಗಡಿಯಲ್ಲಿ ಭಯೋತ್ಪಾದನೆ ನಿಲ್ಲುವವರೆಗೂ ಪಾಕ್ ಜೊತೆ ಯಾವುದೇ ವ್ಯಾಪಾರ ವಹಿವಾಟು ನಡೆಸಬಾರದೆಂದು ಅವರು ಬಹಿರಂಗವಾಗಿ ಹೇಳಿದ್ದರು. ಈ ಹಿನ್ನೆಲೆಯಲ್ಲಿಯೇ ಉಗ್ರರು ಬೆದರಿಕೆ ಹಾಕಿರಬಹುದು ಎಂದು ಹೇಳಲಾಗುತ್ತಿದೆ.
ಈ ಸಂಬಂಧ ದೆಹಲಿ ಸೆಂಟ್ರಲ್ ಡಿಸಿಪಿಗೆ ಗಂಭೀರ್ ದೂರು ನೀಡಿದ್ದಾರೆ. ಸೂಕ್ತ ಭದ್ರತೆ ಒದಗಿಸುವಂತೆ ಮನವಿ ಮಾಡಿದ್ದಾರೆ. ಇದಕ್ಕೆ ಪೊಲೀಸ್ ಇಲಾಖೆ ಸ್ಪಂದಿಸಿದೆ. ಜೊತೆಗೆ ಪ್ರಕರಣದ ಬಗ್ಗೆ ತನಿಖೆ ಕೂಡಾ ಕೈಗೊಂಡಿದೆ.