ಕೊನೆಗೂ ವಿಚಾರಣೆಗೆ ಹಾಜರಾದ ಶಾಸಕ ಮಾಡಾಳ್
ಬೆಂಗಳೂರು; ಚನ್ನಗಿರಿ ಶಾಸಕ ಮಾಡಾಳ್ ವಿರೂಪಾಕ್ಷಪ್ಪ ಅವರು ಕೊನೆಗೂ ಲೋಕಾಯುಕ್ತದ ಮುಂದೆ ವಿಚಾರಣೆಗೆ ಹಾಜರಾಗಿದ್ದಾರೆ. ತಮ್ಮ ವಕೀಲರ ಜೊತೆ ಲೋಕಾಯುಕ್ತ ಕಚೇರಿಗೆ ಬಂದಿದ್ದು, ವಿಚಾರಣೆ ಎದುರಿಸುತ್ತಿದ್ದಾರೆ.
ಪ್ರಕರಣದ ತನಿಖಾಧಿಕಾರಿ ಅಂಥೋನಿ ಜಾನ್ ಅವರ ಮುಂದೆ ಶಾಸಕರು ಹಾಜರಾಗಿದ್ದು, ಕೆಎಸ್‌ಡಿಎಲ್ ಹಾಗೂ ಟೆಂಡರಿಂಗ್ ಬಗ್ಗೆ ವಿಚಾರಣೆ ಎದುರಿಸುತ್ತಿದ್ದಾರೆ. ಮಾಡಾಳ್ ಅವರ ಪುತ್ರ ಪ್ರಶಾಂತ್ ನಲವತ್ತು ಲಕ್ಷ ರೂಪಾಯಿ ಲಂಚ ಸ್ವೀಕರಿಸುತ್ತಿದ್ದ ವೇಳೆ ಲೋಕಾಯುಕ್ತಕ್ಕೆ ಸಿಕ್ಕಿಬಿದ್ದಿದ್ದರು. ಕೆಎಸ್‌ಡಿಎಲ್‌ನಲ್ಲಿ ಟೆಂಡರ್ ಕೊಡಿಸುಲು ಈ ಲಂಚ ಸ್ವೀಕಾರ ಮಾಡಲಾಗುತ್ತಿತ್ತು. ಜೊತೆಗೆ ಅವರ ಮನೆಯಲ್ಲಿ ಆರು ಕೋಟಿ ರೂಪಾಯಿ ನಗದು ಪತ್ತೆಯಾಗಿತ್ತು. ಅನಂತರ ಶಾಸಕ ಮಾಡಾಳ್ ಅವರ ಮನೆಯಲ್ಲೂ ಶೋಧ ಕಾರ್ಯ ನಡೆಸಲಾಗಿತ್ತು.
ಕೇಸ್ ದಾಖಲಾಗುತ್ತಿದ್ದಂತೆ ನಾಪತ್ತೆಯಾಗಿದ್ದ ಮಾಡಾಳ್, ಮಧ್ಯಂತರ ಜಾಮೀನು ಸಿಕ್ಕ ನಂತರ ಹೊರಗಡೆ ಕಾಣಿಸಿಕೊಂಡಿದ್ದರು. ಕೋರ್ಟ್ ಸೂಚನೆಯಂತೆ ಅವರು 48 ಗಂಟೆಗಳ ಒಳಗೆ ಲೋಕಾಯುಕ್ತದ ಮುಂದೆ ಹಾಜರಾಗಬೇಕಿತ್ತು. ಹೀಗಾಗಿ ಇಂದು ಅವರು ವಿಚಾರಣೆಗೆ ಹಾಜರಾಗಿದ್ದಾರೆ.