CrimeNationalPolitics

ಚಂದ್ರಬಾಬು ನಾಯ್ಡುಗೆ ಮಧ್ಯಂತರ ಜಾಮೀನು; ಆ 5 ಷರತ್ತುಗಳೇನು..?

ಹೈದರಾಬಾದ್‌; ಆಂಧ್ರಪ್ರದೇಶದ ಮಾಜಿ ಮುಖ್ಯಮಂತ್ರಿ ನಾರಾ ಚಂದ್ರಬಾಬು ನಾಯ್ಡು ಅವರಿಗೆ ಆಂಧ್ರಪ್ರದೇಶ ಹೈಕೋರ್ಟ್ ಮಧ್ಯಂತರ ಜಾಮೀನು ಮಂಜೂರು ಮಾಡಿದೆ.

ಕೌಶಲ್ಯಾಭಿವೃದ್ಧಿ ಯೋಜನೆ ಪ್ರಕರಣದಲ್ಲಿ ಬಂಧಿತರಾಗಿರುವ ಅವರು 52 ದಿನಗಳಿಂದ ರಾಜಮಹೇಂದ್ರವರಂ ಕೇಂದ್ರ ಕಾರಾಗೃಹದಲ್ಲಿ ವಿಚಾರಣಾಧೀನ ಕೈದಿಯಾಗಿದ್ದರು.

ಅಕ್ಟೋಬರ್ 30ರಂದು ಚಂದ್ರಬಾಬು ಅವರ ಮಧ್ಯಂತರ ಜಾಮೀನು ಅರ್ಜಿಯ ವಿಚಾರಣೆಯನ್ನು ಹೈಕೋರ್ಟ್ ಮುಕ್ತಾಯಗೊಳಿಸಿ ತೀರ್ಪನ್ನು ಕಾಯ್ದಿರಿಸಿತ್ತು. ಮಂಗಳವಾರ ತೀರ್ಪು ಪ್ರಕಟಿಸಿ, ಚಂದ್ರಬಾಬು ಅವರಿಗೆ ನಾಲ್ಕು ವಾರಗಳ ಕಾಲ ಷರತ್ತುಬದ್ಧ ಮಧ್ಯಂತರ ಜಾಮೀನು ನೀಡಲಾಗಿದೆ ಎಂದು ಕೋರ್ಟ್‌ ಹೇಳಿದೆ.

ಅನಾರೋಗ್ಯದ ಹಿನ್ನೆಲೆಯಲ್ಲಿ ಅವರಿಗೆ ಜಾಮೀನು ನೀಡಲಾಗುತ್ತಿದೆ ಎಂದು ನ್ಯಾಯಮೂರ್ತಿ ಟಿ.ಮಲ್ಲಿಕಾರ್ಜುನ ರಾವ್ ಅವರ ಪೀಠ ಹೇಳಿದೆ. ಐದು ಷರತ್ತುಗಳೊಂದಿಗೆ ಜಾಮೀನು ನೀಡಲಾಗಿದೆ. ಈ ಜಾಮೀನಿನ ಮೂಲಕ ಕೌಶಲ್ಯಾಭಿವೃದ್ಧಿ ಪ್ರಕರಣದಲ್ಲಿ ಚಂದ್ರಬಾಬು ಅವರಿಗೆ ತಾತ್ಕಾಲಿಕ ರಿಲೀಫ್ ಸಿಕ್ಕಿದೆ. ಆದರೆ, ಇತ್ತೀಚೆಗೆ ದಾಖಲಾದ ಮದ್ಯದ ಪ್ರಕರಣಗಳ ಜತೆಗೆ ಅಮರಾವತಿ ಇನ್ನರ್ ರಿಂಗ್ ರೋಡ್ ಮತ್ತು ಎಪಿ ಫೈಬರ್ ನೆಟ್ ಪ್ರಕರಣಗಳೂ ಅವರನ್ನು ಕಾಡುವ ಸಾಧ್ಯತೆ ಇದೆ.

ಚಂದ್ರಬಾಬು ನಾಯ್ಡುಗೆ ವಿಧಿಸಿರುವ ಐದು ಷರತ್ತುಗಳು

೧.  ಒಂದು ಲಕ್ಷ ರೂ.ಗಳ ಶ್ಯೂರಿಟಿ ಬಾಂಡ್. ಇಬ್ಬರು ವ್ಯಕ್ತಿಗಳ ಶ್ಯೂರಿಟಿ
೨. ಸ್ವಂತ ಖರ್ಚಿನಲ್ಲಿ ಬಯಸಿದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯಬಹುದು
೩. ಜೈಲಿನಲ್ಲಿ ಶರಣಾಗುವ ಮುನ್ನ ಅರ್ಜಿದಾರರು ತಾವು ಪಡೆದ ಚಿಕಿತ್ಸೆಯ ವಿವರಗಳು ಮತ್ತು ಆಸ್ಪತ್ರೆಯ ವಿವರಗಳನ್ನು ರಾಜಮಹೇಂದ್ರವರಂ ಕೇಂದ್ರ ಕಾರಾಗೃಹದ ಅಧೀಕ್ಷಕರಿಗೆ ಮುಚ್ಚಿದ ಕವರ್‌ನಲ್ಲಿ ಸಲ್ಲಿಸಬೇಕು. ಜೈಲಿನ ಸೂಪರಿಂಟೆಂಡೆಂಟ್  ಅವುಗಳನ್ನು ಯಥಾವತ್ತಾಗಿ ವಿಚಾರಣಾ ನ್ಯಾಯಾಲಯಕ್ಕೆ ಒದಗಿಸಬೇಕು,
೪. ಅರ್ಜಿದಾರರು ಈ ಪ್ರಕರಣಕ್ಕೆ ಸಂಬಂಧಿಸಿದ ಸಾಕ್ಷಿಗಳಿಗೆ ನೇರವಾಗಿ ಅಥವಾ ಪರೋಕ್ಷವಾಗಿ ಬೆದರಿಕೆ ಹಾಕುವಂತಿಲ್ಲ

೫. ಅರ್ಜಿದಾರರು 28-11-2023 ರಂದು ಸಂಜೆ 5 ಗಂಟೆಗೆ ರಾಜಮಹೇಂದ್ರವರಂ ಕೇಂದ್ರ ಕಾರಾಗೃಹದ ಅಧೀಕ್ಷಕರ ಮುಂದೆ ಶರಣಾಗತರಾಗಬೇಕು.

Z+ ಭದ್ರತೆ ವಿಚಾರದಲ್ಲಿ ಕೇಂದ್ರ ನಿಯಮಗಳ ಪ್ರಕಾರವೇ ವ್ಯವಹರಿಸಬೇಕು ಹಾಗೂ ಚಂದ್ರಬಾಬು ಅವರ ಭದ್ರತೆ ವಿಚಾರದಲ್ಲಿ ನ್ಯಾಯಾಲಯ ಮಧ್ಯಪ್ರವೇಶಿಸುವುದಿಲ್ಲ ಎಂದು ನ್ಯಾಯಾಧೀಶರು ಹೇಳಿದ್ದಾರೆ.

ವೈದ್ಯಕೀಯ ಸಹಾಯ ಪಡೆಯಲು ಈ ಜಾಮೀನು ನೀಡಲಾಗುತ್ತಿದ್ದು, ನವೆಂಬರ್ 10 ರಂದು ಸಾಮಾನ್ಯ ಜಾಮೀನು ಅರ್ಜಿ ವಿಚಾರಣೆ ನಡೆಯಲಿದೆ ಎಂದು ನ್ಯಾಯಾಲಯ ತಿಳಿಸಿದೆ. ಇಂದು ಸಂಜೆ 5 ಗಂಟೆಯ ನಂತರ ಚಂದ್ರಬಾಬು ಬಿಡುಗಡೆಯಾಗುವ ಸಾಧ್ಯತೆ ಇದ್ದು, ಅವರ ವಕೀಲರು ಜಾಮೀನು ಆದೇಶದ ಪ್ರತಿಯನ್ನು ತೆಗೆದುಕೊಂಡು ರಾಜಮಹೇಂದ್ರವರಂ ಕೇಂದ್ರ ಕಾರಾಗೃಹಕ್ಕೆ ಹಾಜರುಪಡಿಸಿದ್ದಾರೆ.

Share Post