ಗ್ಯಾಸ್ ಲಾರಿಯಲ್ಲಿ ಬೆಂಕಿ; ನೂರಕ್ಕೂ ಹೆಚ್ಚು ಸಿಲಿಂಡರ್‌ಗಳ ಸ್ಫೋಟ
ಗಿಡ್ಡಲುರ್ (ಆಂಧ್ರಪ್ರದೇಶ); ಆಂಧ್ರಪ್ರದೇಶದಲ್ಲಿ 300 ಕ್ಕೂ ಹೆಚ್ಚು ಗ್ಯಾಸ್ ಸಿಲಿಂಡರ್ ಹೊತ್ತೊಯ್ಯುತ್ತಿದ್ದ ಲಾರಿಯಲ್ಲಿ ಬೆಂಕಿ ಕಾಣಿಸಿಕೊಂಡಿದ್ದು, 100ಕ್ಕೂ ಹೆಚ್ಚು ಸಿಲಿಂಡರ್ ಸ್ಫೋಟಗೊಂಡಿವೆ. ಲಾರಿ ಸಂಪೂರ್ಣ ಸುಟ್ಟು ಕರಕಲಾಗಿದೆ. ಅನಂತಪುರ-ಗುಂಟೂರು ರಾಷ್ಟ್ರೀಯ ಹೆದ್ದಾರಿಯ ಪ್ರಕಾಶಂ ಜಿಲ್ಲೆಯ ಕೊಮರೋಳು ಮಂಡಲದ ದಡ್ಡವಾಡ ಗ್ರಾಮದಲ್ಲಿ ಈ ದುರ್ಘಟನೆ ನಡೆದಿದೆ.
ಕರ್ನೂಲ್‌ನಿಂದ ನೆಲ್ಲೂರು ಜಿಲ್ಲೆಯ ಉಳವಪಾಡು ಕಡೆಗೆ ಭಾರತ್ ಗ್ಯಾಸ್ ಸಿಲಿಂಡರ್‌ಗಳನ್ನು ತುಂಬಿಸಿಕೊಂಡು ಹೋಗುತ್ತಿದ್ದ ಲಾರಿಯ ಕ್ಯಾಬಿನ್‌ನಲ್ಲಿ ಬೆಂಕಿ ಕಾಣಿಸಿಕೊಂಡಿದೆ. ಇದನ್ನು ಗಮನಿಸಿದ ಚಾಲಕ ಮೋಹನ್ ರಾಜು ಕೆಳಗಿಳಿದಿದ್ದಾನೆ. ಬೆಂಕಿ ಲಾರಿ ತುಂಬಾ ಆವರಿಸಿದ್ದು, ಎಲ್ಲಾ ಸಿಲಿಂಡರ್‌ಗಳು ಬೆಂಕಿಗೆ ಆಹುತಿಯಾಗಿವೆ. ಇದರಿಂದಾಗಿ ರಾಷ್ಟ್ರೀಯ ಹೆದ್ದಾರಿಯ ಎರಡೂ ಬದಿಯಲ್ಲಿ ಅರ್ಧ ಕಿ.ಮೀ. ದೂರದಲ್ಲಿ ವಾಹನಗಳು ನಿಂತಿದ್ದವು.
ಸಿಲಿಂಡರ್‌ಗಳು ಸ್ಫೋಟಗೊಂಡಿದ್ದರಿಂದ ಎಚ್ಚೆತ್ತ ಹೆದ್ದಾರಿ ಪೊಲೀಸರು ಅಪಘಾತ ನಡೆದ ಸ್ಥಳದಿಂದ 300 ಮೀಟರ್ ದೂರದ ದಡ್ಡವಾಡದಲ್ಲಿ ಸುಮಾರು 30 ಮನೆಗಳಿಂದ ಜನರನ್ನು ಸ್ಥಳಾಂತರಿಸಿದ್ದಾರೆ. ಸಿಲಿಂಡರ್‌ಗಳು ಸ್ಫೋಟಗೊಳ್ಳುತ್ತಿದ್ದರಿಂದ 200 ಮೀಟರ್ ದೂರದಿಂದಲೇ ಬೆಂಕಿ ನಂದಿಸಲು ಅಗ್ನಿಶಾಮಕ ದಳ ಸಿಬ್ಬಂದಿ ಯತ್ನಿಸಿದರು. ಆ ಭಾಗದಲ್ಲಿ ವಾಹನ ಸಂಚಾರ ಸ್ಥಗಿತಗೊಂಡಿದ್ದು, ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ.