ಜನವಸತಿ ಪ್ರದೇಶದಲ್ಲಿ ಶವ ಸಂಸ್ಕಾರ ಪ್ರಶ್ನಿಸಿದ್ದಕ್ಕೆ ಲೇಔಟ್ ಅಧ್ಯಕ್ಷನಿಗೆ ಕಲ್ಲೇಟು
ಬೆಂಗಳೂರು: ಜನವಸತಿ ಪ್ರದೇಶದಲ್ಲಿ ಶವ ಸಂಸ್ಕಾರ ಮಾಡಬೇಡಿ ಎಂದಿದ್ದಕ್ಕೆ ಲೇಔಟ್ ಅಸೋಸಿಯೇಷನ್ ಅಧ್ತಕ್ಷರಿಗೆ ಮೃತ ವೃದ್ಧೆಯ ಸಂಬಂಧಿಕರು ಕಲ್ಲಿನಿಂದ ಹೊಡೆದು ಹಲ್ಲೆ ಮಾಡಿರುವ ಘಟನೆ ನಗರದ ಬೊಮ್ಮನಹಳ್ಳಿಯ ಪಾಂಡುರಂಗ ಲೇಔಟ್‌ನಲ್ಲಿ ನಡೆದಿದೆ.
ಮೂರು ದಿನಗಳ ಹಿಂದೆ ವೃದ್ಧೆಯೊಬ್ಬರು ಸಾವನ್ನಪ್ಪಿದ್ರು. ಹಾಗಾಗಿ ಮನೆ ಮಾಲೀಕ ಸ್ವಂತ ಸ್ಥಳದಲ್ಲಿ ಶವ ಸಂಸ್ಕಾರ ಮಾಡಲು ಸಕಲ ಸಿದ್ಧತೆಗಳನ್ನು ಮಾಡಿಕೊಂಡು, ಗುಂಡಿಯಲ್ಲಿ ಹೆಣವಿಟ್ಟು ಸಂಸ್ಕಾರ ಮಾಡುವ ವೇಳೆ ಅಲ್ಲಿನ ಸ್ಥಳೀಯ ನಿವಾಸಿಗಳು ಅಡ್ಡಿ ಮಾಡಿದ್ದಾರೆ. ಇದು ಜನವಸತಿ ಪ್ರದೇಶ ಇಲ್ಲಿ ಅಂತ್ಯ ಸಂಸ್ಕಾರ ಮಾಡದಂತೆ ಮನವಿ ಮಾಡಿದ್ದಾರೆ. ಆದರೆ ಇದಕ್ಕೆ ಬಗ್ಗದ ಮೃತ ಸಂಬಂಧಿಕರು ಈ ಸ್ಥಳ ನಮ್ಮ ಸ್ವಂತದ್ದಾಗಿದೆ ಇಲ್ಲಿಯೇ ಮಾಡಿ ತೀರುತ್ತೇವೆ ಎಂದು ವಾದ ಮಾಡಿದ್ದಾರೆ. ವಾಗ್ವಾದ ತಾರಕಕ್ಕೇರಿ ಲೇಔಟ್ ಅಸೋಸಿಯೇಷನ್ ಅಧ್ಯಕ್ಷರಿಗೆ ಮೃತ ವೃದ್ದೆಯ ಸಂಬಂಧಿಕರು ಕಲ್ಲಿನಿಂದ ದಾಳಿ ಮಾಡಿದ್ದಾರೆ.
ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಎಲ್ಲರ ಮನವೊಲಿಸಿ ಅಂತ್ಯ ಸಂಸ್ಕಾರಕ್ಕೆ ಅನುವು ಮಾಡಿಕೊಟ್ಟಿದ್ದಾರೆ. ಪೊಲೀಸರ ನಡೆಗೆ ಇದೀಗ ಸ್ಥಳೀಯರು ಆಕ್ರೋಸ ವ್ಯಕ್ತಪಡಿಸಿದ್ದಾರೆ. ಸ್ವಂತ ಸ್ಥಳವಾದ್ರೂ ಜನವಸತಿ ಪ್ರದೇಶದಲ್ಲಿ ಅಂತ್ಯ ಸಂಸ್ಕಾರ ಮಾಡುವಂತಿಲ್ಲ ಎಂಬ ನಿಯಮವಿದೆ. ಇವರು ಅದನ್ನು ಮುರಿದಿದ್ದಾರೆ. ಹಾಗಾದ್ರೆ ಕೊರೊನಾದಲ್ಲಿ ಮೃತಪಟ್ಟವರಿಗೆ ಈ ನಿಯಮ ಯಾಕೆ ಅನ್ವಯ ಆಗಿಲ್ಲ. ಸ್ವಂತ ಸ್ಥಳ ಅಂದ ಮಾತ್ರಕ್ಕೆ ಏನು ಬೇಕಾದ್ರೂ ಮಾಡಬಹುದಾ ಎಂದು ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಈ ಬಗ್ಗೆ ಸ್ಥಳೀಯರು ಪೊಲೀಸ್ ಠಾಣೆಯಲ್ಲಿ ದೂರನ್ನು ದಾಖಲಿಸಿರುವುದಾಗಿ ಮಾಹಿತಿ ನೀಡಿದ್ದಾರೆ.