BengaluruCrimePolitics

ಶಾಸಕರ ಸೀಟ್‌ನಲ್ಲಿ ಖಾಸಗಿ ವ್ಯಕ್ತಿ ಪ್ರತ್ಯಕ್ಷ; ಡಿಸಿಎಂಗೆ ಶೇಕ್‌ಹ್ಯಾಂಡ್‌ ಕೂಡಾ ಮಾಡಿದ!

ಬೆಂಗಳೂರು; ಇಂದು ಬಜೆಟ್‌ ನಡೆಯುವ ಸಂದರ್ಭದಲ್ಲಿ ಖಾಸಗಿ ವ್ಯಕ್ತಿಯೊಬ್ಬ ಸದನ ಪ್ರವೇಶಿಸಿದ್ದು, ಶಾಸಕರೊಬ್ಬ ಸೀಟಿನಲ್ಲಿ ಹದಿನೈದು ನಿಮಿಷ ಕುಳಿತಿದ್ದ ಘಟನೆ ನಡೆದಿದೆ. ದೇವದುರ್ಗ ಕ್ಷೇತ್ರದ ಶಾಸಕಿ ಕರೆಮ್ಮ ಅವರಿಗೆ ಮೀಸಲಿದ್ದ ಆಸನದಲ್ಲಿ ಖಾಸಗಿ ವ್ಯಕ್ತಿಯೊಬ್ಬ ಕುಳಿತಿದ್ದ ಎನ್ನಲಾಗಿದೆ. ಅನಂತರ ಆತ ಡಿಸಿಎಂ ಡಿ.ಕೆ.ಶಿವಕುಮಾರ್‌ ಅವರ ಕೈಕುಲುಕಿ ಹೋಗಿದ್ದಾನೆ ಎಂದು ತಿಳಿದುಬಂದಿದೆ.

ಅಪರಚಿತ ವ್ಯಕ್ತಿಯನ್ನು ಕಂಡ ಗುರುಮಿಠಕಲ್‌ ಶಾಸಕ ಶರಣಗೌಡ ಕಂದಕೂರು ಅವರು, ನೀವು ಯಾರೆಂದು ಪ್ರಶ್ನೆ ಮಾಡಿದ್ದಾರೆ. ಈ ವೇಳೆ ಆತ ಮೊಳಕಾಲ್ಮೂರು ಶಾಸಕ ಎಂದು ಹೇಳಿದನಂತೆ. ಇನ್ನು ಶರಣಗೌಡ ಕಂಕೂರು ಅವರು ಜಿ.ಟಿ.ದೇವೇಗೌಡರನ್ನು ಅವರು ಯಾರೆಂದು ಗೊತ್ತಾ ಎಂದು ಕೇಳಿದ್ದಾರೆ. ಆದ್ರೆ ಜಿ.ಟಿ.ದೇವೇಗೌಡರು ಯಾರೋ ಗೊತ್ತಿಲ್ಲ ಎಂದಿದ್ದಾರೆ. ಭದ್ರತಾಲೋಪದಿಂದ ಖಾಸಗಿ ವ್ಯಕ್ತಿ ಸದನಕ್ಕೆ ಬಂದಿದ್ದಾರೆ ಎಂದು ಶಾಸಕ ಶರಣಗೌಡ ಕಂದಕೂರು ಆರೋಪಿಸಿದ್ದಾರೆ.

ಇದೀಗ ಶಾಸಕ ಶರಣಗೌಡರ ದೂರಿನ ಹಿನ್ನೆಲೆಯಲ್ಲಿ ಸದನ ಪ್ರವೇಶಿಸಿದ್ದ ವ್ಯಕ್ತಿಯನ್ನು ವಿಧಾನಸೌಧ ಠಾಣೆ ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ. ಆರೋಪಿಯನ್ನು 72 ವರ್ಷದ ತಿಪ್ಪೇರುದ್ರ ಎಂದು ಗುರುತಿಸಲಾಗಿದೆ. ಮಾರ್ಷಲ್‌ಗಳಿಗೆ ಆವಾಜ್‌ ಹಾಕಿ ತಿಪ್ಪೇರುದ್ರ ಅವರು ಸದನ ಪ್ರವೇಶಿಸಿದ್ದರು ಎಂದು ತಿಳಿದುಬಂದಿದೆ. ಮೊಳಕಾಲ್ಲೂರು ಶಾಸಕ ಎನ್‌.ವೈ.ಗೋಪಾಲಕೃಷ್ಣ ಎಂದು ಹೇಳಿಕೊಂಡು ಸದನದ ಒಳಗೆ ಹೋಗಿದ್ದಾನೆ ಎಂದು ತಿಳಿದುಬಂದಿದೆ. ತಿಪ್ಪೇರುದ್ರ ಅವರು ಚಿತ್ರದುರ್ಗದ ನಿವಾಸಿಯಾಗಿದ್ದು, ವಕೀಲರಾಗಿದ್ದರು ಎಂದು ತಿಳಿದುಬಂದಿದೆ.

Share Post