CinemaCrimePolitics

ಬಿಜೆಪಿ ಕಾರ್ಯಕರ್ತನ ಆತ್ಮಹತ್ಯೆಗೆ ಟ್ವಿಸ್ಟ್‌; ಪತ್ನಿ ಕೊಟ್ಟ ದೂರಲ್ಲೇನಿದೆ..?

ಕಲಬುರಗಿ; ನಿನ್ನೆ ಕಲಬುರಗಿ ಜಿಲ್ಲೆ ಚಿಂಚೋಳಿಯಲ್ಲಿ ಬಿಜೆಪಿ ಕಾರ್ಯಕರ್ತ ಶಿವಕುಮಾರ್‌ ಎಂಬಾತ ಆತ್ಮಹತ್ಯೆ ಮಾಡಿಕೊಂಡಿದ್ದ. ಇದಕ್ಕೆ ಕಾಂಗ್ರೆಸ್‌ ಕಾರ್ಯಕರ್ತರು ಹಾಗೂ ಸಚಿವ ಶರಣಪ್ರಕಾಶ್‌ ಪಾಟೀಲರೇ ಕಾರಣ ಎಂದು ಆರೋಪಿಸಲಾಗಿತ್ತು. ಈ ಸಂಬಂಧ ಶಿವಕುಮಾರ್‌ ಅವರದ್ದೆನ್ನಲಾದ ಆಡಿಯೋ ಒಂದನ್ನು ಕೂಡಾ ರಿಲೀಸ್‌ ಮಾಡಲಾಗಿತ್ತು. ಆದ್ರೆ, ಇದೀಗ ಪ್ರಕರಣಕ್ಕೆ ಟ್ವಿಸ್ಟ್‌ ಸಿಕ್ಕಿದೆ. 

ಶಿವಕುಮಾರ್‌ ಸುಮಾರು 12 ಲಕ್ಷ ರೂಪಾಯಿ ಸಾಲ ಮಾಡಿಕೊಂಡಿದ್ದರು. ಸಾಲ ಹೇಗೆ ತೀರಿಸೋದು ಎಂದು ಗೊತ್ತಾಗದೇ ಕುಡಿತದ ದಾಸರಾಗಿದ್ದರು. ಇನ್ನು ಈ ಬಾರಿ ಮಳೆಯಾಗದಿದ್ದುದರಿಂದ ಬೆಳೆಯಲಾಗಿದ್ದು ಹೆಸರು ಬೆಳೆ ಕೂಡಾ ಹಾಳಾಗಿತ್ತು. ಇದರಿಂದ ಮನನೊಂದು ಶಿವಕುಮಾರ್‌ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಹೀಗಂತ, ಶಿವಕುಮಾರ್‌ ಅವರ ಪತ್ನಿ ಮಲ್ಲಮ್ಮ ಅವರೇ ಪೊಲೀಸರಿಗೆ ಕೊಟ್ಟ ದೂರಿನಲ್ಲಿ ಹೇಳಿದ್ದಾರೆ.

ಸುಲೆಪೇಟ್ ಪೊಲೀಸ್ ಠಾಣೆಯಲ್ಲಿ ಮಲ್ಲಮ್ಮ ದೂರು ದಾಖಲಿಸಿದ್ದು, ನನ್ನ ಗಂಡ ಸಾಲದಿಂದಲೇ ಆತ್ಮಹತ್ಯೆ ಮಾಡಿಕೊಂಡಿದ್ದು, ಯಾರ ಮೇಲೆಯೂ ಅನುಮಾನವಿಲ್ಲ ಎಂದು ದೂರಿನಲ್ಲಿ ಹೇಳಲಾಗಿದೆ. ಸದ್ಯ ದೂರು ಸ್ವೀಕರಿಸಿರುವ ಪೊಲೀಸರು ಯುಡಿಆರ್ (ಅಸಹಜ ಸಾವು) ಪ್ರಕರಣ ದಾಖಲಿಸಿಕೊಂಡಿದ್ದಾರೆ.

 

Share Post