ತಮಿಳುನಾಡು ಮಾಜಿ ಸಚಿವ ರಾಜೇಂದ್ರ ಬಾಲಾಜಿಗೆ ನ್ಯಾಯಾಂಗ ಬಂಧನ
ಮಧುರೈ: ಕರ್ನಾಟಕದ ಹಾಸನ ನಗರದಲ್ಲಿ ಸಿನಿಮೀಯ ರೀತಿಯ ಕಾರ್ಯಾಚರಣೆಯಲ್ಲಿ ಸಿಕ್ಕಿಬಿದ್ದಿದ್ದ ತಮಿಳುನಾಡಿನ ಮಾಜಿ ಸಚಿವ ರಾಜೇಂದ್ರ ಬಾಲಾಜಿ ಅವರನ್ನು ಕೋರ್ಟ್ 15 ದಿನ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದೆ. ಸರ್ಕಾರಿ ಕೆಲಸ ಕೊಡಿಸುತ್ತೇನೆಂದು ಕೋಟ್ಯಂತರ ರೂಪಾಯಿ ಪಡೆದು ವಂಚನೆ ಮಾಡಿರುವ ಪ್ರಕರಣ ಸೇರಿದಂತೆ ಎರಡು ಕೇಸ್‌ಗಳಲ್ಲಿ ಎಐಎಡಿಎಂಕೆ ಮುಖಂಡ ರಾಜೇಂದ್ರ ಬಾಲಾಜಿ ಪೊಲೀಸರಿಗೆ ಬೇಕಾಗಿದ್ದರು. ನಿರೀಕ್ಷಣಾ ಜಾಮೀನು ಸಿಗದಿದ್ದರಿಂದಾಗಿ ಅವರು, ಕೆಲ ದಿನಗಳಿಂದ ತಲೆಮರೆಸಿಕೊಂಡಿದ್ದರು. ನಿನ್ನೆ ಹಾಸನ ನಗರದಲ್ಲಿ ಕಾರಿನಲ್ಲಿ ಹೋಗುತ್ತಿದ್ದ ರಾಜೇಂದ್ರ ಬಾಲಾಜಿ ಅವರನ್ನು ತಮಿಳುನಾಡು ಪೊಲೀಸರು ಸಿನಿಮೀಯ ರೀತಿಯಲ್ಲಿ ಬಂಧಿಸಿ, ತಮಿಳುನಾಡಿಗೆ ಕರೆದೊಯ್ದಿದ್ದರು.
ರಾಜೇಂದ್ರ ಬಾಲಾಜಿ ಅವರು ಕಳೆದ ಸರ್ಕಾರದ ಅವಧಿಯಲ್ಲಿ ಹೈನುಗಾರಿಕೆ ಸಚಿವರಾಗಿದ್ದರು. ಈ ವೇಳೆ ಮೂರು ಕೋಟಿ ರೂಪಾಯಿಗಳನ್ನು ವಂಚಿಸಿರುವ ಆರೋಪ ಎದುರಿಸುತ್ತಿದ್ದಾರೆ. ಆದ್ರೆ, ಅವ್ರು ವಿಚಾರಣೆಗೆ ಹಾಜರಾಗದೇ ತಲೆಮರೆಸಿಕೊಂಡಿದ್ದರು. ಈ ಹಿನ್ನೆಲೆಯಲ್ಲಿ ಹುಡುಕಾಟ ನಡೆಸಿದ್ದ ಪೊಲೀಸರಿಗೆ ಹಾಸನ ನಗರದಲ್ಲಿ ಸಿಕ್ಕಿಬಿದ್ದಿದ್ದರು. ಅವರನ್ನು ಬುಧವಾರ ಮಧ್ಯರಾತ್ರಿ ವಿರುಧ್‌ನಗರದ ಜಿಲ್ಲಾ ನ್ಯಾಯಾಧೀಶರ ಮುಂದೆ ಹಾಜರುಪಡಿಸಲಾಯಿತು. ನ್ಯಾಯಾಧೀಶರು, ರಾಜೇಂದ್ರ ಬಾಲಾಜಿ ಅವರಿಗೆ 15 ದಿನ ನ್ಯಾಯಾಂಗ ಬಂಧನ ವಿಧಿಸಿದ್ದಾರೆ.
ಇನ್ನು ಮದ್ರಾಸ್ ಹೈಕೋರ್ಟ್ ರಾಜೇಂದ್ರ ಬಾಲಾಜಿ ಅವರ ಜಾಮೀನು ಅರ್ಜಿಯನ್ನು ತಿರಸ್ಕರಿಸಿತ್ತು. ಈ ಹಿನ್ನೆಲೆಯಲ್ಲಿ ಅವರು ಸುಪ್ರೀಂ ಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಿದ್ದರು. ಇದರ ವಿಚಾರಣೆ ಇಂದು ನಡೆಯಲಿದೆ.