ಕೊಯಮತ್ತೂರು ಕಾರ್ ಬಾಂಬ್ ಕೇಸ್; ಕರ್ನಾಟಕ, ಕೇರಳ, ತಮಿಳುನಾಡಲ್ಲಿ ದಾಳಿ
ಚೆನ್ನೈ; ಕೆಲ ತಿಂಗಳ ಹಿಂದೆ ತಮಿಳುನಾಡಿನ ಕೊಯಮತ್ತೂರಿನಲ್ಲಿ ಕಾರಿನಲ್ಲಿ ಬಾಂಬ್ ಸ್ಫೊಟಿಸಲಾಗಿತ್ತು. ಈ ಪ್ರಕರಣ ಸಂಬಂಧ ತನಿಖೆ ನಡೆಸುತ್ತಿರುವ ಎನ್‌ಐಎ ಅಧಿಕಾರಿಗಳು ಇಂದು ಮೂರು ರಾಜ್ಯಗಳಲ್ಲಿ ಏಕಕಾಲದಲ್ಲಿ ದಾಳಿ ನಡೆಸಿದ್ದಾರೆ. ತಮಿಳುನಾಡು, ಕೇರಳ ಹಾಗೂ ಕರ್ನಾಟಕದ ವಿವಿಧ ಕಡೆ ಅಧಿಕಾರಿಗಳು ದಾಳಿ ಮಾಡಿ ಪರಿಶೀಲನೆ ನಡೆಸುತ್ತಿದ್ದಾರೆ.
ಚೆನ್ನೈ ನಗರ ಮತ್ತು ತಮಿಳುನಾಡಿನ ಹಲವು ಜಿಲ್ಲೆಗಳ 60 ಕ್ಕೂ ಹೆಚ್ಚು ಸ್ಥಳಗಳಲ್ಲಿ ಎನ್ಐಎ ದಾಳಿ ನಡೆಸಿದೆ. ಚೆನ್ನೈ, ಕೊಯಮತ್ತೂರು, ಮೈಲಾಡುತುರೈ, ತಿರುನಲ್ವೇಲಿ ಮತ್ತು ತೆಂಕಶಿಗಳಲ್ಲಿ ಅಧಿಕಾರಿಗಳು ಪರಿಶೀಲನೆ ನಡೆಸಿದ್ದಾರೆ. ಬೆಂಗಳೂರು, ಮಂಗಳೂರು, ಮೈಸೂರುಗಳಲ್ಲೂ ದಾಳಿ ನಡೆದಿದೆ ಎನ್ನಲಾಗುತ್ತಿದೆ.
ಕೊಯಮತ್ತೂರಿನ ಉಕ್ಕಡಂ ದೇವಾಲಯದ ಬಳಿ ಕಾರ್ ಬ್ಲಾಸ್ಟ್ ಮಾಡಲಾಗಿತ್ತು. ಈ ಘಟನೆಯಲ್ಲಿ ಒಬ್ಬರು ಸಾವನ್ನಪ್ಪಿದ್ದರು. ಇನ್ನು ಮಂಗಳೂರಿನಲ್ಲಿ ಆಟೋದಲ್ಲಿ ಕುಕ್ಕರ್ ಬಾಂಬ್ ಸ್ಫೋಟಿಸಲಾಗಿತ್ತು. ಎರಡೂ ಪ್ರಕರಣಗಳಿಗೆ ಸಾಮ್ಯತೆ ಇರೋದು ಕಂಡುಬಂದಿದೆ. ಈ ಹಿನ್ನೆಲೆಯಲ್ಲಿ ಎನ್‌ಐಎ ಅಧಿಕಾರಿಗಳು ತನಿಖೆ ತೀವ್ರಗೊಳಿಸಿದ್ದಾರೆ.