ಮಾಜಿ ಸಿಎಂ ಯಡಿಯೂರಪ್ಪ ಮೊಮ್ಮಗಳು ಆತ್ಮಹತ್ಯೆ
ಬೆಂಗಳೂರು: ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರ ಮೊಮ್ಮಗಳು ಸೌಂದರ್ಯ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಮೂವತ್ತು ವರ್ಷದ ಸೌಂದರ್ಯ ಮನೆಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾರೆ. ಬೌರಿಂಗ್ ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆ ನಡೆಸಲಾಗಿದೆ.
ಎಂಬಿಬಿಎಸ್ ಓದಿದ್ದ ಸೌಂದರ್ಯ ಅವರು ರಾಮಯ್ಯ ಆಸ್ಪತ್ರೆಯಲ್ಲಿ ರೇಡಿಯಾಲಜಿಸ್ಟ್ ಆಗಿ ಕೆಲಸ ಮಾಡುತ್ತಿದ್ದರು. ಇವರಿಗೆ ಮದುವೆಯಾಗಿ ಒಂದು ಮಗು ಕೂಡಾ ಇತ್ತು ಎಂದು ತಿಳಿದು ಬಂದಿದೆ. ಹೈಗ್ರೌಂಡ್ಸ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ. ಸೌಂದರ್ಯ ಅವರು ಯಡಿಯೂರಪ್ಪ ಅವರ ಪುತ್ರಿ ಪದ್ಮಾವತಿಯವರ ಮಗಳು ಎಂದು ತಿಳಿದುಬಂದಿದೆ. 2018ರಲ್ಲಿ ಸೌಂದರ್ಯ ಅವರು ಡಾ.ನೀರಜ್ ಎಂಬುವವರನ್ನು ಮದುವೆಯಾಗಿದ್ದರು.
ವಸಂತನಗರದ ಫ್ಲ್ಯಾಟ್‌ನಲ್ಲಿ ವಾಸವಿದ್ದ ಸೌಂದರ್ಯ, ಅಲ್ಲಿಯೇ ಫ್ಯಾನ್‌ಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಬೆಳಗ್ಗೆ ಹತ್ತು ಗಂಟೆ ಸುಮಾರಿಗೆ ಈ ಘಟನೆ ನಡೆದಿದೆ. ಸೌಂದರ್ಯ ಪತಿ ನೀರಜ್ ಬೆಳಗ್ಗೆ 8 ಗಂಟೆಗೆ ಕೆಲಸಕ್ಕೆ ತೆರಳಿದ್ದಾರೆ. ಆದರೆ ಸೌಂದರ್ಯ ಕೊಠಡಿಯಲ್ಲಿ ಬಾಗಿಲು ಹಾಕಿಕೊಂಡಿದ್ದವರು ಎಷ್ಟು ಹೊತ್ತಾದರೂ ಹೊರಬಂದಿಲ್ಲ. ಹೀಗಾಗಿ ಮನೆಕೆಲಸದವರು ಆತಂಕಗೊಂಡು ಪತಿ ನೀರಜ್‌ಗೆ ಕರೆ ಮಾಡಿದ್ದಾರೆ. ಬಾಗಿಲು ಒಡೆದು ನೋಡಿದಾಗ ಸೌಂದರ್ಯ ನೇಣು ಬಿಗಿದುಕೊಂಡಿರುವ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ. ಇನ್ನೂ ಜೀವಂತವಾಗಿದ್ದ ಅವರನ್ನು ಕೂಡಲೇ ಹತ್ತಿರದ ಮಲ್ಲಿಗೆ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಆಸ್ಪತ್ರೆಯಲ್ಲಿ ವೆಂಟಿಲೇಟರ್ ಮೂಲಕ ಸೌಂದರ್ಯರನ್ನು ಬದುಕಿಸುವ ಪ್ರಯತ್ನ ಮಾಡಲಾಯಿತು. ಆದ್ರೆ, ಚಿಕಿತ್ಸೆ ಫಲಕಾರಿಯಾಗದೇ ಸೌಂದರ್ಯ ಸಾವನ್ನಪ್ಪಿದ್ದಾರೆ. ಆತ್ಮಹತ್ಯೆಗೆ ಕಾರಣ ತಿಳಿದುಬಂದಿಲ್ಲ. ವಿಷಯ ಗೊತ್ತಾಗುತ್ತಿದ್ದಂತೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರು ಮಾಜಿ ಸಿಎಂ ಯಡಿಯೂರಪ್ಪ ಅವರ ಕಾವೇರಿ ನಿವಾಸಕ್ಕೆ ಭೇಟಿ ನೀಡಿದ್ದರು.