ರಾಹುಲ್ ಗಾಂಧಿಗೆ ಸುಪ್ರೀಂ ಕೋರ್ಟ್‌ನಲ್ಲಿ ದೊಡ್ಡ ಗೆಲುವು; ಸೂರತ್ ಕೋರ್ಟ್ ತೀರ್ಪಿಗೆ ತಡೆ
ನವದೆಹಲಿ; ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಗೆ ಸುಪ್ರೀಂಕೋರ್ಟ್‌ನಿಂದ ದೊಡ್ಡ ಜಯ ಸಿಕ್ಕಿದೆ. ಸೂರತ್ ಕೋರ್ಟ್ ನೀಡಿದ್ದ ಎರಡು ವರ್ಷ ಜೈಲು ಶಿಕ್ಷೆ ತೀರ್ಪಿಗೆ ಸುಪ್ರೀಂ ಕೋರ್ಟ್ ತಡೆ ನೀಡಿದ್ದು, ರಾಹುಲ್ ಗಾಂಧಿಗೆ ರಿಲೀಫ್ ಸಿಕ್ಕಿದೆ. ಇದರಿಂದಾಗಿ, ರಾಹುಲ್ ಗಾಂಧಿಯವರ ಸಂಸತ್ ಸ್ಥಾನದ ಅನರ್ಹತೆ ರದ್ದುಗೊಳ್ಳಲಿದೆ. ಜೊತೆಗೆ ಅವರು ಮುಂದಿನ ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧೆಗೆ ಅವಕಾಶ ಸಿಗಲಿದೆ.
ಕಳೆದ ಲೋಕಸಭಾ ಚುನಾವಣೆ ವೇಳೆ ಕೋಲಾರದಲ್ಲಿ ಭಾಷಣ ಮಾಡುವಾಗ ರಾಹುಲ್ ಗಾಂಧಿಯವರು ಮೋದಿ ಎಂಬ ಸರ್ ನೇಮ್ ಇರುವವರೆಲ್ಲಾ ಕಳ್ಳರೇ ಎಂದು ಹೇಳಿದ್ದರು. ಇದನ್ನು ಪ್ರಶ್ನಿಸಿ ಮೋದಿ ಸರ್ ನೇಮ್ ಇರುವ ಬಿಜೆಪಿ ಶಾಸಕರೊಬ್ಬರು ಸೂರತ್ ಕೋರ್ಟ್‌ನಲ್ಲಿ ಮಾನನಷ್ಟ ಮೊಕದ್ದಮೆ ಹೂಡಿದ್ದರು. ವಿಚಾರಣೆ ನಡೆಸಿದ್ದ ಕೋರ್ಟ್ ರಾಹುಲ್ ಗಾಂಧಿಗೆ ಎರಡು ವರ್ಷ ಜೈಲು ಶಿಕ್ಷೆ ವಿಧಿಸಿತ್ತು. ಎರಡು ವರ್ಷ ಹಾಗೂ ಅದಕ್ಕಿಂತ ಹೆಚ್ಚು ಶಿಕ್ಷೆಗೆ ಗುರಿಯಾದರೆ ಅವರ ಪ್ರಜಾಪ್ರತಿನಿಧಿತ್ವ ಅನರ್ಹವಾಗುತ್ತದೆ. ಜೊತೆಗೆ ಆರು ವರ್ಷ ಚುನಾವಣೆಗೆ ನಿಲ್ಲುವಂತೆ ಇಲ್ಲ. ಈ ಕಾರಣಕ್ಕಾಗಿಯೇ ಸೂರತ್ ಕೋರ್ಟ್ ತೀರ್ಪಿನ ನಂತರ ರಾಹುಲ್ ಗಾಂಧಿಯವರ ಸಂಸತ್ ಸದಸ್ಯತ್ವನ್ನು ಅನರ್ಹ ಮಾಡಲಾಗಿತ್ತು.
ಆದ್ರೆ ಸುಪ್ರೀಂಕೋರ್ಟ್ ಈಗ ಶಿಕ್ಷೆಗೆ ತಡೆ ನೀಡಿದೆ. ಹೀಗಾಗಿ ರಾಹುಲ್ ಗಾಂಧಿಯವರಿಗೆ ಮತ್ತೆ ಸಂಸತ್ ಸ್ಥಾನ ಸಿಗಲಿದೆ. ಜೊತೆಗೆ ಮುಂಬರುವ ಚುನಾವಣೆಯಲ್ಲಿ ಸ್ಪರ್ಧೆಗೂ ಅವಕಾಶ ಸಿಗಲಿದೆ.