ಕಲುಷಿತ ನೀರಿಗೆ ಮತ್ತೊಬ್ಬ ಬಾಲಕಿ ಬಲಿ; ಏನಾಗ್ತಿದೆ ಕೊಪ್ಪಳದಲ್ಲಿ..?
ಕೊಪ್ಪಳ; ಕಲುಷಿತ ನೀರಿಗೆ ಕೊಪ್ಪಳ ಜಿಲ್ಲೆಯಲ್ಲಿ ಮತ್ತೊಬ್ಬ ಬಾಲಕಿ ಸಾವನ್ನಪ್ಪಿದ್ದಾಳೆ. ಈಗಾಗಲೇ ಒಂದು ಮಗು ಹಾಗೂ ಮಹಿಳೆ ಸಾವನ್ನಪ್ಪಿದ್ದರು. ಇದೀಗ ಸಾವಿನ ಸಂಖ್ಯೆ ಮೂರಕ್ಕೇರಿದೆ. ಅಧಿಕಾರಿಗಳ ನಿರ್ಲಕ್ಷ್ಯಕ್ಕೆ ಸಾಮಾನ್ಯ ಜನರು ಬಲಿಯಾಗುತ್ತಿದ್ದಾರೆ. ಕುಷ್ಟಗಿ ತಾಲೂಕಿನ ಬಿಜಕಲ್ ಗ್ರಾಮದಲ್ಲಿ ವಾಂತಿ ಭೇದಿಯಿಂದ ಬಳಲುತ್ತಿದ್ದ ಬಾಲಕಿ ಮೃತಪಟ್ಟಿದ್ದಾಳೆ. ನಿರ್ಮಲಾ ಈರಪ್ಪ ಬೆಳಗಲ್ ಎಂಬ 10 ವರ್ಷದ ಬಾಲಕಿ ಮೃತಪಟ್ಟ ದುರ್ದೈವಿಯಾಗಿದ್ದಾಳೆ.
ಕೆಲ ದಿನಗಳ ಹಿಂದಷ್ಟೇ ಕನಕಗಿರಿ ತಾಲೂಕಿನ ಬಸರಿಹಾಳ ಗ್ರಾಮದಲ್ಲಿ ಕಲುಷಿತ ನೀರು ಸೇವನೆಯಿಂದಾಗಿ 30ಕ್ಕೂ ಹೆಚ್ಚು ಜನರಿಗೆ ವಾಂತಿ ಬೇಧಿಯಾಗಿತ್ತು. ಈ ವೇಳೆ ಒಂದೂವರೆ ವರ್ಷದ ಮಗು ಹಾಗೂ ಹೊನ್ನಮ್ಮ ಎಂಬ ವೃದ್ದೆ ಸಾವನ್ನಪ್ಪಿದ್ದರು. ಇದೀಗ ಕುಷ್ಟಗಿ ತಾಲ್ಲೂಕಿನಲ್ಲಿ ಒಂದು ಬಾಲಕಿ ಸಾವನ್ನಪ್ಪಿದ್ದಾಳೆ. ಬಿಜಕಲ್ ಗ್ರಾಮದಲ್ಲಿ ಕಲುಷಿತ ನೀರು ಸೇವೆನೆಯಿಂದ 15 ಕ್ಕೂ ಹೆಚ್ಚು ಮಂದಿಗೆ ಅನಾರೋಗ್ಯವುಂಟಾಗಿದೆ. ಎಲ್ಲರೂ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಮೃತ ಬಾಲಕಿಗೆ ನಿನ್ನೆ ರಾತ್ರಿ ವಾಂತಿ ಬೇಧಿ ಕಾಣಿಸಿಕೊಂಡಿತ್ತು. ಬೆಳಗ್ಗೆ ಆಸ್ಪತ್ರೆಗೆ ಕರೆದೊಯ್ಯಲಾಗಿದ್ದು, ತೀವ್ರ ಅಸ್ವಸ್ಥಳಾಗಿದ್ದ ಬಾಲಕಿ ಸಾವನ್ನಪ್ಪಿದ್ದಾಳೆ.