ಉರಿಗೌಡ, ನಂಜೇಗೌಡ ಸಿನಿಮಾ ಮಾಡಲ್ಲ; ಮುನಿರತ್ನ
ಮಂಡ್ಯ; ಉರಿಗೌಡ, ನಂಜೇಗೌಡ ಸಿನಿಮಾ ಮಾಡಲ್ಲ ಎಂದು ನಿರ್ಮಾಪಕ ಮುನಿರತ್ನ ಹೇಳಿದ್ದಾರೆ. ಮಂಡ್ಯದ ಕಮ್ಮೇರನಹಳ್ಳಿಯಲ್ಲಿ ಮಾತನಾಡಿದ ಅವರು, ನಿರ್ಮಲಾನಂದ ನಾಥ್ ಶ್ರೀಗಳು ಸಿನಿಮಾ ಬೇಡವೆಂದು ಹೇಳಿದ್ದಾರೆ. ಹೀಗಾಗಿ ಸಿನಿಮಾವನ್ನು ಕೈಬಿಡುತ್ತಿದ್ದೇನೆ ಎಂದು ಹೇಳಿದ್ದಾರೆ.
ಉರಿಗೌಡ ಹಾಗೂ ನಂಜೇಗೌಡ ಎಂಬುವವರು ಟಿಪ್ಪು ಸುಲ್ತಾನ್‌ರನ್ನು ಕೊಂದಿದ್ದು ಎಂದು ಇತ್ತೀಚೆಗೆ ಪ್ರಚಾರವಾಗುತ್ತಿದೆ. ಇದನ್ನು ರಾಜಕೀಯಕ್ಕೂ ಬಳಸಿಕೊಳ್ಳಲಾಗುತ್ತಿದೆ. ಈ ಬಗ್ಗೆ ಇತ್ತೀಚೆಗೆ ಚರ್ಚೆಗಳು ತಾರಕಕ್ಕೇರುತ್ತಿವೆ. ಇದರ ನಡುವೆ ಮುನಿರತ್ನ ಅವರು ಉರಿಗೌಡ, ನಂಜೇಗೌಡ ಸಿನಿಮಾ ಮಾಡಲು ಹೊರಟಿದ್ದರು. ಟೈಟಲ್‌ಗಾಗಿ ಚಲನಚಿತ್ರ ವಾಣಿಜ್ಯ ಮಂಡಳಿಗೆ ಪತ್ರವನ್ನೂ ಬರೆದಿದ್ದರು.
ಆದ್ರೆ ಆದಿಚುಂಚನಗಿರಿ ಮಠದ ನಿರ್ಮಲಾನಂದ ಶ್ರೀಗಳು ಮುನಿರತ್ನರನ್ನು ಕರೆಸಿ, ಸಿನಿಮಾ ಮಾಡದಂತೆ ಸೂಚಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಅವರು ಸಿನಿಮಾ ಮಾಡುವ ನಿರ್ಧಾರದಿಂದ ಹಿಂದೆ ಸರಿದಿದ್ದಾರೆ. ಅಂದುಕೊಂಡಂತೆ ಆಗಿದ್ದರೆ, ಮೇ 18ರಂದು ಸಿನಿಮಾ ಮುಹೂರ್ತ ನಡೆಯಬೇಕಿತ್ತು.
ಯಾರಿಗೂ ಮನಸು ನೋಯಿಸಿ ಸಿನಿಮಾ ಮಾಡಬಾರದು. ಗೊಂದಲ ಇರುವಾಗ ಯಾವುದು ಸೂಕ್ತ ಎಂದು ಶ್ರೀಗಳು ಕೇಳಿದರು. ಹೀಗಾಗಿ ಯಾರಿಗೂ ಮನಸ್ಸು ನೋಯಿಸೋದು ಬೇಡ ಎಂದು ಸಿನಿಮಾ ಕೈಬಿಡುತ್ತಿದ್ದೇನೆ ಎಂದು ಮುನಿರತ್ನ ಹೇಳಿದ್ದಾರೆ. ಸಿನಿಮಾ ಮಾಡುವಾಗ ನೈಜ ಘಟನೆಗಳನ್ನಷ್ಟೇ ಸೇರಿಸಿ ಮಾಡಲು ಆಗುವುದಿಲ್ಲ. ಆಗ ಕೆಲವರ ಮನಸ್ಸು ನೋಯುತ್ತದೆ. ಕೆಲವರು ಕೋರ್ಟ್‌ಗೆ ಹೋಗಬಹುದು. ಹೀಗಾಗಿ ಗೊಂದಲ ಬೇಡ ಎಂದು ಸಿನಿಮಾ ಮಾಡುತ್ತಿಲ್ಲ ಎಂದು ಮುನಿರತ್ನ ಹೇಳಿದ್ದಾರೆ.