Cinema

ಭಾರತ ಚಿತ್ರರಂಗಕ್ಕೆ ಬಾಂಡ್‌ ಸಿನಿಮಾ ಪರಿಚಯಿಸಿದ್ದು ಡಾ ರಾಜ್‌ಕುಮಾರ್

ಕನ್ನಡದ ಚಿತ್ರರಂಗದ್ದು ಒಂದು ದೊಡ್ಡ ಇತಿಹಾಸವಿದೆ. 88 ವರ್ಷಗಳಿಂದ ಸುಧೀರ್ಘವಾಗಿ ನಡೆದುಕೊಂಡು ಬಂದಿರುವ ಕನ್ನಡ ಚಿತ್ರರಂಗದಲ್ಲಿ ಡಾ|| ರಾಜ್ ಕುಮಾರ್ ಅವರದ್ದು ದೊಡ್ಡ ಅಧ್ಯಾಯ. ಅಣ್ಣಾವ್ರು ಇಲ್ಲದ ಕನ್ನಡ ಚಿತ್ರರಂಗವನ್ನು ಊಹಿಸಿಕೊಳ್ಳೋದೂ ಕೂಡ ಅಸಾಧ್ಯ. ಸಿಂಗಾನಲ್ಲೂರ್ ಪುಟ್ಟಸ್ವಾಮಿ ಮುತ್ತುರಾಜು ಅಲಿಯಾಸ್ ವರನಟ ಡಾ|| ರಾಜ್ ಕುಮಾರ್ ಅವರು ಹುಟ್ಟಿದ್ದು ಏಪ್ರಿಲ್ 24 1929ರಂದು. ಪುಟ್ಟಸ್ವಾಮಿಯವರೂ ಕೂಡ ರಂಗ ಕರ್ಮಿ ಆಗಿದ್ದರಿಂದ ಅಣ್ಣಾವ್ರಿಗೂ ನಾಟಕದ ಮೇಲೆ ಒಲವು ಬಂತು. ಬೇಡರ ಕಣ್ಣಪ್ಪ ಸಿನಿಮಾ ಮೂಲಕ ತಮ್ಮ ಸಿನಿಮಾ ಪಯಣವನ್ನು ಶುರು ಮಾಡಿದ ಅಣ್ಣಾವ್ರು ಹಿಂದೆ ತಿರುಗಿ ನೋಡಿದ್ದೇ ಇಲ್ಲ. ಸಿನಿಮಾ ಮೂಲಕ ಎಷ್ಟು ಕೀರ್ತಿ ಸಂಪಾದಿಸಿದರೋ ಅದಕ್ಕಿಂತ ದುಪ್ಪಟ್ಟು ಗುರುತಿಸಿಕೊಂಡದ್ದು, ಅವರ ನಡತೆಯಿಂದ, ವಿನಯವಂತಿಕೆ ಇಂದ. ಅಣ್ಣಾವ್ರ ಸಿನಿಮಾಗಳನ್ನು ನೋಡುತ್ತಿದ್ದ ಪ್ರೇಕ್ಷಕ ವರ್ಗಕ್ಕಿಂದ ಅವರನ್ನು ಅನುಸರಿಸುತ್ತಿದ್ದ ಅಭಿಮಾನಿಗಳ ಬಳಗ ದೊಡ್ಡದು. ಅವರ ಹೇರ್ ಸ್ಟೈಲ್, ಅವರ ಕಾಸ್ಟ್ಯೂಮ್ಸ್, ಇನ್ನು ಅವರ ನಡೆಯನ್ನು ಅನುಸರಿಸಿ ಬದುಕಿದವರು ಅದೆಷ್ಟೋ ಮಂದಿ. ಅಣ್ಣಾವ್ರಿಗೆ ಬಂದಿರುವ ಬಿರುದುಗಳನ್ನು ಲೆಕ್ಕ ಹಾಕೋಕೂ ಕಷ್ಟ ಆಗುತ್ತೆ, ಅಷ್ಟು ಬಿರುದುಗಳು ಅವರಿಗೆ ಸಿಕ್ಕಿದ್ದವು. ಅಣ್ಣಾವ್ರು ಸಮಾಜಕ್ಕೆ ಕೆಟ್ಟ ಸಂದೇಶವನ್ನು ನೀಡಬಾರದು ಎಂಬ ಕಾರಣಕ್ಕೆ ಅವರು ಎಂದಿಗೂ ತೆರೆ ಮೇಲೆ ಸಿಗರೇಟ್ ಸೇದುವುದಾಗಲಿ, ಮದ್ಯ ಸೇವಿಸುವ ಪಾತ್ರವನ್ನಾಗಲಿ ಮಾಡುತ್ತಿರಲಿಲ್ಲ.

ಭಾರತದಲ್ಲಿ ಮೊದಲು ಬಾಂಡ್ ಸಿನಿಮಾ ಮಾಡಿದ್ದು ಅಣ್ಣಾವ್ರೇ

ಬಾಂಡ್ ಸಿನಿಮಾದಿಂದ ಹಿಡಿದು ಒಬ್ಬ ರೈತನ ಪಾತ್ರಕ್ಕೂ ಕೂಡ ಅಣ್ಣಾವ್ರು ಸೂಟ್ ಆಗುತ್ತಿದ್ದರು. ಭಾರತದಲ್ಲಿ ಬಾಂಡ್ ಸಿನಿಮಾಗಳನ್ನು ಹುಟ್ಟು ಹಾಕಿದ್ದೇ ಅಣ್ಣಾವ್ರು. ದೊರೈ ಭಗವಾನ್ ಅವರು ಬಾಂಡ್ ಸಿನಿಮಾ ಮಾಡೋಣ್ವಾ ಎಂದು ಡಾ ರಾಜ್ ಕುಮಾರ್ ಅವರನ್ನು ಕೇಳಿದಾಗ ಅಣ್ಣಾವ್ರು ಜೋರಾಗಿ ನಕ್ಕಿದ್ದರಂತೆ. ಇಂಗ್ಲೀಶ್ ಸಿನಿಮಾ ನೋಡಿ ಕನ್ನಡ ಸಿನಿಮಾ ಮಾಡೋಣ ಅಂತೀರಲ್ಲ ನಿಮ್ಮ ಬುದ್ಧಿಗೆ ಏನ್ ಹೇಳ್ಬೇಕು ಅಂದಿದ್ದರಂತೆ ರಾಜ್ ಕುಮಾರ್. ನೀವು ಒಪ್ಪಿಗೆ ಕೊಡಿ ನಾವು ಮಾಡಿ ತೋರಿಸುತ್ತೀವಿ ಎಂದು ಚಾಲೆಂಜ್ ಮಾಡಿದ್ದರಂತೆ ದೊರೆ-ಭಗವಾನ್. ಜೇಡರಬಲೆ ಸಿನಿಮಾ ನೋಡಿ ಬೆಕ್ಕಸ ಬೆರಗಾಗಿತ್ತು ಭಾರತ ಚಿತ್ರರಂಗ

ಇನ್ನು ಕಸ್ತೂರಿ ನಿವಾಸದ ಕ್ಲೈಮ್ಯಾಕ್ಸ್ ಸೀನ್ ಅಲ್ಲಿ ಅಣ್ಣಾವ್ರು ನಡೆದುಕೊಂಡು ಬರುವ ಸೀನ್ ನೋಡಿ ಎಷ್ಟೋ ಜನ ಅಣ್ಣಾವ್ರು ಊಟ ಮಾಡಿ ಎಷ್ಟು ದಿನ ಆಯ್ತು ಅಂತ ಕೇಳೋರಂತೆ. ಅಷ್ಟರ ಮಟ್ಟಿಗೆ ನಟನೆಯಲ್ಲಿ ಮಗ್ನರಾಗುತ್ತಿದ್ದರು ಅಣ್ಣಾವ್ರು. ಈಗಿನ ರೀತಿ ಆಗ ಡಿಜಿಟಲ್ ಕ್ಯಾಮರಾಗಳಿರಲಿಲ್ಲ. ರೀಲ್ ಅನ್ನು ಹೆಚ್ಚು ಖರ್ಚು ಮಾಡಲು ಅವಕಾಶ ಇರಲಿಲ್ಲ. ಅಣ್ಣಾವ್ರು ಮೊದಲೇ ನಾಟಕದ ಬ್ಯಾಗ್ರೌಂಡ್ ಆಗಿದ್ದ ಕಾರಣ ಬಹುತೇಕ ಸೀನ್ಗಳನ್ನು ಸಿಂಗಲ್ ಟೇಕ್ ಅಲ್ಲಿ ಮುಗಿಸುತ್ತಿದ್ದರಂತೆ. ಅಣ್ಣಾವ್ರು ಓದಿದ್ದು ನಾಲ್ಕನೇ ಕ್ಲಾಸ್ ಆದರೂ ಅವರ ವಿನಯವಂತಿಕೆ ಮುಂದೆ ಎಲ್ಲರೂ ತಲೆ ಬಾಗಿ ನಿಲ್ಲುತ್ತಿದ್ದರು. ಇನ್ನು ನಟನೆಯಲ್ಲಿ ನಟಸಾರ್ವಭೌಮ ನಮ್ ಅಣ್ಣಾವ್ರು.

Share Post