ರೇಣುಕಾಚಾರ್ಯಗೆ ಹೈಕಮಾಂಡ್ ಬುಲಾವ್; ಫೆ.8ಕ್ಕೆ ದೆಹಲಿ ಪ್ರಯಾಣ
ದಾವಣಗೆರೆ: ಹೊನ್ನಾಳಿ ಶಾಸಕ ಎಂ.ಪಿ.ರೇಣುಕಾಚಾರ್ಯ ಹದಿನೈದಕ್ಕೂ ಹೆಚ್ಚು ಸಚಿವರ ವಿರುದ್ಧ ಕಿಡಿಕಾರುತ್ತಿದ್ದಾರೆ. ಜೊತೆಗೆ ಈ ಬಗ್ಗೆ ವರಿಷ್ಠರಿಗೆ ದೂರು ಕೂಡಾ ನೀಡಿದ್ದಾರೆ. ಈ ಹಿನ್ನೆಲೆಯಲ್ಲಿ ರಾಜ್ಯ ಬಿಜೆಪಿ ಉಸ್ತುವಾರಿ ಅರುಣ್ ಸಿಂಗ್ ಅವರು ದೆಹಲಿಗೆ ಬರುವಂತೆ ರೇಣುಕಾಚಾರ್ಯಗೆ ಬುಲಾವ್ ನೀಡಿದಾರೆ.
ಈ ಬಗ್ಗೆ ದಾವಣಗೆರೆಯಲ್ಲಿ ಮಾತನಾಡಿರುವ ಶಾಸಕ ಎಂ.ಪಿ.ರೇಣುಕಾಚಾರ್ಯ ಅವರು, ನನಗೆ ಅರುಣ್ ಸಿಂಗ್ ಅವರು ಕರೆ ಮಾಡಿದ್ದರು. ಬಹಿರಂಗವಾಗಿ ಮಾತನಾಡುವುದರಿಂದ ಪಕ್ಷಕ್ಕೆ ಮುಜುಗರ ಉಂಟಾಗುತ್ತದೆ. ಬಹಿರಂಗವಾಗಿ ಹೇಳಿಕೆ ನೀಡಬೇಡಿ ಎಂದು ಹೇಳಿದ್ದಾರೆ. ಜೊತೆಗೆ ಫೆಬ್ರವರಿ 8 ರಂದು ದೆಹಲಿಗೆ ಬರುವಂತೆ ಆಹ್ವಾನ ನೀಡಿದ್ದಾರೆ ಎಂದು ಹೇಳಿದರು.
ಫೆಬ್ರವರಿ ಎಂಟರಂದು ನಾನು ದೆಹಲಿಗೆ ಹೋಗುತ್ತೇನೆ. ಫೆಬ್ರವರಿ 8, 9 ಮತ್ತು 10ರಂದು ನಾನು ದೆಹಲಿಯಲ್ಲಿರುತ್ತೇನೆ. ವರಿಷ್ಠರ ಬಳಿ ಎಲ್ಲವನ್ನೂ ವಿವರಿಸುತ್ತೇನೆ ಎಂದು ಶಾಸಕ ರೇಣುಕಾಚಾರ್ಯ ಇದೇ ಸಂದರ್ಭದಲ್ಲಿ ತಿಳಿಸಿದರು. ಸಂಪುಟ ವಿಸ್ತರಣೆ ಅಥವಾ ಸಂಪುಟ ಪುನಾರಚನೆ ಬಗ್ಗೆ ಸಿಎಂ ಬೊಮ್ಮಾಯಿ ಹಾಗೂ ಪಕ್ಷದ ರಾಜ್ಯಾಧ್ಯಕ್ಷರಾದ ಕಟೀಲ್ ಅವರ ಜೊತೆ ಮಾತನಾಡಿದ್ದೇನೆ. ಸಿಎಂ ಬೊಮ್ಮಾಯಿಯವರು ನನ್ನ ಮನವಿಗೆ ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ ಎಂದು ರೇಣುಕಾಚರಾಯ್ಯ ಹೇಳಿದರು.
ಇನ್ನು ಅರುಣ್ ಸಿಂಗ್ ಕರೆ ಮಾಡಿದ್ದರ ಬಗ್ಗೆ ಹಾಗೂ ದೆಹಲಿಗೆ ಹೋಗುವುದರ ಬಗ್ಗೆ ಯತ್ನಾಳ್ ಅವರ ಜೊತೆ ಚರ್ಚೆ ನಡೆಸಿದ್ದೀರಾ ಎಂಬ ಪ್ರಶ್ನೆಗೆ ಉತ್ತರಿಸಿರುವ ಶಾಸಕ ರೇಣುಕಾಚಾರ್ಯ, ಯತ್ನಾಳ್ ಅವರಿಗೆ ಈ ಬಗ್ಗೆ ತಿಳಿಸಿಲ್ಲ. ದೆಹಲಿಯಿಂದ ಬಂದ ನಂತರ ಅವರ ಜೊತೆ ಮಾತನಾಡುತ್ತೇನೆ ಎಂದು ಹೇಳಿದ್ದಾರೆ.