ಪ್ರೇಮಿಗಳ ದಿನದಂದು ಪ್ರೇಮಂ ಪೂಜ್ಯಂ ಸೀಕ್ವೆಲ್‌ಗೆ ಚಾಲನೆ
ಬೆಂಗಳೂರು : ನೆನಪಿರಲಿ ಖ್ಯಾತಿಯ ಪ್ರೇಮ್ ಅವರ ೨೫ನೇ ಸಿನಿಮಾ ಪ್ರೇಮಂ ಪೂಜ್ಯಂ ಸಾಧಾರಣ ಮಟ್ಟದ ಯಶಸ್ಸು ಪಡೆದಿತ್ತು. ಆದರೂ ಅದರ ಸೀಕ್ವೆಲ್ ಘೋಷಣೆ ಮಾಡಲು ಚಿತ್ರ ತಂಡ ಸಿದ್ಧವಾಗಿದೆ. ಚಿತ್ರದಲ್ಲಿ ವೈದ್ಯಕೀಯ ವಿದ್ಯಾರ್ಥಿಯಾಗಿ ಪ್ರೇಮ್ ಕಾಣಿಸಿಕೊಂಡಿದ್ದರು. ಈ ಸಿನಿಮಾ ಕೆಲವರಿಗೆ ಮಾತ್ರ ಇಷ್ಟವಾಗಿತ್ತು. ಈಗ ಇದರ ಸೀಕ್ವೆಲ್‌ಗೆ ಫೆ ೧೪ರಂದು ಚಾಲನೆ ನೀಡಲಿದ್ದಾರೆ.
ಸಿನಿಮಾ ತೆರೆಕಂಡು ಎರಡು ತಿಂಗಳು ತುಂಬುವುದರೊಳಗೇ ಸೀಕ್ವೆಲ್ ಅನೌನ್ಸ್ ಮಾಡಲು ಚಿತ್ರತಂಡ ಸಜ್ಜಾಗಿದೆ. ಇದರಿಂದ ಪ್ರೇಮ್ ಅವರ ೨೬ನೇ ಸಿನಿಮಾ ಕೂಡ ಪ್ರೇಮಂ ಪೂಜ್ಯಂ ಆಗಿರಲಿದೆ. ಬಿ.ಎಸ್.ರಾಘವೇಂದ್ರ ಅವರೇ ಈ ಸಿನಿಮಾವನ್ನು ಕೂಡ ನಿರ್ದೇಶನ ಮಾಡಲಿದ್ದಾರೆ. ಚಿತ್ರದ ಮೊದಲ ಭಾಗದಲ್ಲಿ ಕೆಲಸ ಮಾಡಿದ್ದ ಬಹುತೇಕ ಕಲಾವಿದರು, ತಂತ್ರಜ್ಞರು ಈ ಚಿತ್ರದಲ್ಲೂ ಮುಂದುವರಿಯಲಿದ್ದಾರೆ ಎನ್ನಲಾಗಿದೆ.
ಪ್ರೇಮಂ ಪೂಜ್ಯಂ ರೀಮೇಕ್ ರೈಟ್ಸ್ಗೂ ಕೂಡ ಒಳ್ಳೆ ಬೇಡಿಕೆ ಬಂದಿದೆ, ಓಟಿಟಿ ಅವರೂ ಒಳ್ಳೆ ಅಮೌಂಟ್ ಕೊಡಲು ರೆಡಿ ಇದ್ದಾರೆ ಎಂದು ಚಿತ್ರತಂಡ ಹೇಳಿದೆ. ಆದರೆ ಈ ಯಾವುದನ್ನು ಸದ್ಯಕ್ಕೆ ನಿರ್ಮಾಪಕರು ಒಪ್ಪಿಕೊಂಡಿಲ್ಲ.