ಕುವೆಂಪು ಅವರ ಮನೆಗೆ ಭೇಟಿ ನೀಡಿದ ಜಗ್ಗೇಶ್
ಶಿವಮೊಗ್ಗ : ರಾಘವೇಂದ್ರ ಸ್ಟೋರ್ಸ್ ಚಿತ್ರದ ಚಿತ್ರೀಕರಣದಲ್ಲಿ ತೊಡಗಿರುವ ಜಗ್ಗೇಶ್ ಅವರು ಇಂದು ಕುವೆಂಪು ಅವರ ಮನೆಗೆ ಭೇಟಿ ನೀಡಿದ್ದಾರೆ. ಚಿತ್ರೀಕರಣದ ಬಿಡುವಿನ ಸಮಯದಲ್ಲಿ ಕುವೆಂಪು ಅವರ ಮನೆಗೆ ಭೇಟಿ ಕೊಟ್ಟು ಕೆಲ ಕಾಲ ಅಲ್ಲಿಯೇ ಇದ್ದು ಬಂದಿದ್ದಾರೆ.
ಸಂತೋಷ್ ಆನಂದ್‌ರಾಮ್ ಅವರ ನಿರ್ದೇಶನದಲ್ಲಿ ಮೂಡಿ ಬರುತ್ತಿರುವ ರಾಘವೇಂದ್ರ ಸ್ಟೋರ್ಸ್ ಸಿನಿಮಾ ಚಿತ್ರೀಕರಣ ಹಂತದಲ್ಲಿದೆ. ಕುವೆಂಪು ಅವರ ಮನೆಯ ಜಾಗದಿಂದ 14 ಕಿಲೋಮೀಟರ್ ದೂರದಲ್ಲಿಯೇ ಸಿನಿಮಾ ಚಿತ್ರೀಕರಣ ಸಾಗಿದೆ. ಚಿತ್ರೀಕರಣದ ನಡುವೆ ಬಿಡುವು ಮಾಡಿಕೊಂಡ ಜಗ್ಗೇಶ್ ಕುವೆಂಪು ಅವರ ಮನೆಗೆ ಭೇಟಿ ಕೊಟ್ಟಿದ್ದಾರೆ. ತಮ್ಮ ಸಾಮಾಜಿಕ ಖಾತೆಯಲ್ಲಿ ಫೋಟೋ ಹಂಚಿಕೊಂಡಿದ್ದಾರೆ.
ಜಗ್ಗೇಶ್ ಫೇಸ್‌ಬುಕ್‌ನಲ್ಲಿ ಹೀಗೆ ಬರೆದುಕೊಂಡಿದ್ದಾರೆ.
ಚಿತ್ರೀಕರಣ 2ಘಂಟೆ ವಿರಾಮ ಸಿಕ್ಕಿತು…ಸಮಯ ವ್ಯೆರ್ಥ ಮಾಡಲು ಮನಸ್ಸು ಬರಲಿಲ್ಲಾ..14ಕಿಮಿ ದೂರದಲ್ಲಿ ನನ್ನ ನೆಚ್ಚಿನ ಕವಿ ಕುವೆಂಪುರವರ ಮನೆ ನೆನಪಾಯಿತು ಹೋಗಿಬಿಟ್ಟೆ..!!
ಅವರ ಮನೆಯ ಆವರಣಕ್ಕೆ ಕಾಲಿಟ್ಟಾಗ ಏನೋ ನನಗರಿಯದೆ ರೋಮಾಂಚನ ಆಯಿತು.! ಕುವೆಂಪುರವರ ಮನೆ ಒಂದು ಮೂಲೆಯು ಬಿಡದಂತೆ ತಾಳ್ಮೆಯಿಂದ ಸುತ್ತು ಹಾಕಿದೆ..ಅವರ ಬಾಲ್ಯದಿಂದ ಕೊನೆಯವರೆಗು ಬಳಸಿದ ವಸ್ತು..ಅವರ ಮಗ ಶ್ರೀ ಪೂರ್ಣಚಂದ್ರ ತೇಜಸ್ವಿಯವರು ಕೂಡಿಟ್ಟ ತನ್ನ ತಂದೆಯ
ಅಮೂಲ್ಯ ಚಿತ್ರ ಭಂಡಾರ..ಕುವೆಂಪು ರವರ ತಾತ ತಂದೆ ತಾಯಿ ಬಂಧುಗಳು ಬಳಸಿದ ಪುರಾತನ ವಸ್ತುಗಳು..ಅವರ ಪ್ರಥಮ ಬರವಣಿಗೆ ಅವರ ಗುರುಗಳಿಗೆ
ಅರ್ಪಣೆಯ ನುಡಿಮುತ್ತು..ಅದರಲ್ಲಿ ತಿದ್ಧಿ ಬರೆದ ಪದಪುಂಜ ನನ್ನನ್ನು ಅವರ ಕಾಲಕ್ಕೆ ಕರೆದೋಯಿತು…ಅವರು ಹುಟ್ಟಿದ ವರ್ಷ 1904 ಎಂದಾಗ ಅಯ್ಯೋ ಸಾಯಿಬಾಬ ಬದುಕಿದ್ದರೆ ಆಗ ಎಂದು ಮನಚಿಂತಿಸಿತು..ಅವರ ತಂದೆಯ ಜೊತೆ ಕುಳಿತ ಬಾಲಕನ ಚಿತ್ರ ಹಾಗು ಅವರ ತಂದೆಯ ಮುಖ ಲಕ್ಷಣ ಒಬ್ಬ ಪಾಳೆಗಾರನಂತೆ ಭಾಸವಾಯಿತು..!!
ಅವರ ತಾಯಿ ಬಳಸಿದ ಅಡುಗೆ ಸಾಮಗ್ರಿಗಳು ನನ್ನ ಅಜ್ಜಿಯ ಮನೆ ನೆನಪಿಸಿತು..ವಾವ್ ಎಂಥ ಅದ್ಭುತ ವಂಶ ಅವರದು..ಎಂಥ ಪರಿಸರ ಅವರು ಹುಟ್ಟಿದ ಮನೆ..ಅವರ ಎರಡನೆಯ ಮಗನ ಹೆಂಡತಿ ನೋಡಿ ನನ್ನ ಸೊಸೆ ನೆನಪಾದಳು.. ಜಾತಿಗಳ ಲೆಕ್ಕ ತಪ್ಪದೆ ಹೆಜ್ಜೆಹಾಕುವ ಆ ಕಾಲದಲ್ಲಿ ಎಂಥ ವಿಶಾಲ ಹೃದಯವಿತ್ತು ಕವಿಗಳಿಗೆ..ವಿದೇಶಿ ಹೆಣ್ಣನ್ನು ಮನೆಸೊಸೆಯಾಗಿ ಮನೆ ತುಂಬಿಸಿಕೊಂಡು ವಿಶೇಷ ವ್ಯೆಕ್ತಿಯಾಗಿ ಹೃದಯದಲ್ಲಿ ಉಳಿದು ಬಿಟ್ಟರು ಕುವೆಂಪುರವರು..
ನಾನು ನಮ್ಮ ತಂದೆಯನ್ನ ಅಣ್ಣ ಎಂದು ಕರೆಯುತ್ತಿದ್ದೆ ಕುವೆಂಪುರವರ ಮಗನು ಅವರ ಅಣ್ಣ ಎಂದು ಕರೆಯುತ್ತಿದ್ದರು ಎಂದಾಗ ನನ್ನ ಮನ ನನ್ನ ಅಪ್ಪನ ಕಡೆ ವಾಲಿತು ಭಾವುಕನಾಗಿಬಿಟ್ಟೆ..
ಕುವೆಂಪುರವರು ಅವರ ಪತ್ನಿಯನ್ನು ಎಷ್ಟು ಪ್ರೀತಿಸುತ್ತಿದ್ದರು ಎನ್ನಲು ಅವರ ಮಾತು ತಿಳಿಸುತ್ತದೆ ನನ್ನ ಧರ್ಮ ಪತ್ನಿ ಇದ್ದಿದ್ದರೆ ನಾನು ಶತವರ್ಷ ಬದುಕುತ್ತಿದ್ದೆ ಎಂದದ್ದು..ಎಂಥ ಅರ್ಥಪೂರ್ಣ ದಾಂಪತ್ಯ ಅವರದು ಅಲ್ಲವೆ..
ಅವರ ನೋಡುವ ಅವಕಾಶ ಸಿಗಲಿಲ್ಲಾ ಆದರೆ ಅವರ ಬಿಳಿಮುಡಿ ಕತ್ತರಿಸಿ ಶೇಖರಿಸಿ ಇಟ್ಟದ್ದು ನೋಡಿ ಅವರನ್ನೆ ನೋಡಿದ ಆನಂದವಾಯಿತು..ಅವರ ಮನೆಯ ಮುಂದೆ ಕೂತು ಫೋಟೋ ತೆಗೆಸಿಕೊಳ್ಳಲು ಕೂತಾಗ ಮನಸಲ್ಲಿ ಅವರೊಟ್ಟಿಗೆ ನನ್ನ ಹಿಂದಿನ ಜನ್ಮದಲ್ಲಿ ಕೂತಂತೆ ಭ್ರಮಿಸಿದೆ…
ರಾಮಕೃಷ್ಣ ಪರಮಹಂಸರ ಶಿಷ್ಯರಲ್ಲಿ ಧೀಕ್ಷೆ ಪಡೆದ ವಿಷಯವಂತು ನನ್ನ ಮನಸ್ಸಿಗೆ ಹೇಳಲಾಗದ ಆನಂದವಾಯಿತು..ಕಾರಣ ಆಧ್ಯಾತ್ಮಿಕ ಮಾರ್ಗದಲ್ಲಿ ಸಣ್ಣ ಹೆಜ್ಜೆಹಾಕುತ್ತಿರುವ ನನಗೆ ಗೊತ್ತು ಆ ನಡೆಯ ಆನಂದ..
ಒಟ್ಟಾರೆ ರಾಜ ಮಹಾರಾಜರು ಆಶೀರ್ವಾದ..ದೇಶವಿದೇಶದಲ್ಲಿ ಓದುಗ ಅಭಿಮಾನಿಗಳು..ಸತ್ತಮೇಲು ಸಾವಿರ ವರ್ಷ ನೆನಪಲ್ಲಿ ಉಳಿಯುವ ಸಾಧನೆ..
ಪ್ರಶಸ್ತಿ ಪುರಸ್ಕಾರಕ್ಕೆ ಇವರಿಂದ ಗೌರವ ಬಂದದ್ದೇನು ಅನ್ನಿಸುವಷ್ಟು ಪ್ರಶಸ್ತಿಗಳು..
ಇದನ್ನಲ್ಲವೆ ಹೇಳೋದು ಬದುಕಿದರೆ ರಾಜನಂತೆ ಬದುಕು ಸತ್ತಮೇಲೆ ದೇವರಾಗು ಎಂದು…
ಇವರ ಬದುಕೆ ಅದ್ಭುತ ಅನುಕರಣೀಯ ಅಮೋಘ ಇಂದು ನನ್ನ ಸಮಯ ಸಾರ್ಥಕ ಅನ್ನಿಸಿತು..ಅಕ್ಷರ ಟಂಕಿಸುವಾಗ ತಪ್ಪಿದ್ದರೆ ಕ್ಷಮೆಯಿರಲಿ..ಚಿತ್ರೀಕರಣದ ಬಿಡುವಲ್ಲಿ ಅಕ್ಷರ ಕುಟ್ಟಿದ್ದು…
ಸಮಯಸಿಕ್ಕರೆ ರಸಋಷಿಮನೆಗೆ ನೀವು ಹೋಗಿಬನ್ನಿ