ನಾಳೆ ಪುನೀತ್ ಅಭಿನಯದ ಜೇಮ್ಸ್ ಬಿಡುಗಡೆ; ತೆರಿಗೆ ವಿನಾಯಿತಿ ಘೋಷಣೆಗೆ ಆಗ್ರಹ
ಬೆಂಗಳೂರು: ನಾಳೆ ದಿವಂಗತ ಪುನೀತ್ ರಾಜ್ಕುಮಾರ್ ಅವರ ಜೇಮ್ಸ್ ಚಿತ್ರ ರಿಲೀಸ್ ಆಗುತ್ತಿದೆ. ಪುನೀತ್ ಹುಟ್ಟುಹಬ್ಬದಂದೇ ಸಿನಿಮಾ ರಿಲೀಸ್ ಆಗುತ್ತಿದ್ದು, ಅಭಿಮಾನಿಗಳು ಕಾತರದಿಂದ ಕಾಯುತ್ತಿದ್ದಾರೆ. ಈ ನಡುವೆ ಜೇಮ್ಸ್ ಸಿನಿಮಾಗೆ ತೆರಿಗೆ ವಿನಾಯಿತಿ ನೀಡುವಂತೆ ರಾಜ್ಯ ಸರ್ಕಾರಕ್ಕೆ ಆಗ್ರಹಗಳು ಹೆಚ್ಚಾಗುತ್ತಿವೆ.
ಇನ್ನೊಂದೆಡೆ ದಿ ಕಾಶ್ಮೀರ್ ಫೈಲ್ಸ್ ಸಿನಿಮಾದಂತೆ ಜೇಮ್ಸ್ ಸಿನಿಮಾಕ್ಕೂ ಕೂಡ ತೆರಿಗೆ ವಿನಾಯಿತಿ ಘೋಷಣೆ ಮಾಡಬೇಕು ಎಂಬ ಒತ್ತಾಯ ಕನ್ನಡಿಗರಿಂದ ಸಾಕಷ್ಟು ಕೇಳಿ ಬರುತ್ತಿದೆ. ಈ ಬಗ್ಗೆ ಕಾಂಗ್ರೆಸ್ ನಾಯಕ ಎಂ.ಬಿ.ಪಾಟೀಲ್ ಕೂಡಾ ಆಗ್ರಹಿಸಿದ್ದಾರೆ. ಈ ಬಗ್ಗೆ ಅವರು ಟ್ವೀಟ್ ಮಾಡಿದ್ದಾರೆ. ‘ನಮ್ಮೆಲ್ಲರ ಪ್ರೀತಿಯ ಅಪ್ಪು, ಡಾ. ಪುನೀತ್ ರಾಜ್ಕುಮಾರ್ ಅಭಿನಯದ ಸಿನಿಮಾ ಇದೇ ಮಾರ್ಚ್ 17ರಂದು ಬಿಡುಗಡೆಯಾಗುತ್ತಿದೆ. ಅಂದು ಪುನೀತ್ ಅವರ ಜನ್ಮದಿನ ಕೂಡ. ಈ ಚಿತ್ರವನ್ನು ನೋಡಲು ರಾಜ್ಯವೇ ಕಾತುರದಿಂದ ಕಾಯುತ್ತಿದೆ. ಈ ಚಿತ್ರವನ್ನು ತೆರಿಗೆಮುಕ್ತ ಮಾಡಬೇಕೆಂದು ಒತ್ತಾಯ ಮಾಡುತ್ತೇನೆ’ ಎಂದು ಸಿಎಂ ಬಸವರಾಜ ಬೊಮ್ಮಾಯಿ ಅವರ ಬಳಿ ಮನವಿ ಮಾಡಿಕೊಂಡಿದ್ದಾರೆ.