Cinema

ಸಿನಿಮಾದ ಯಾವ ಶೋ ಟೈಮಿಂಗ್ಸ್ ಗೆ ಯಾವ್ಯಾವ ಜನ ಬರ್ತಿದ್ರು ಗೊತ್ತಾ ?

ಸಿಂಗಲ್ ಸ್ಕ್ರೀನ್ ಇದ್ದ ಕಾಲದ ಚಿತ್ರರಂಗದ ವೈಭವ ಇವತ್ತಿಗೆ ಮಾಸುತ್ತಿದ್ದೆ. ಮಲ್ಟಿಪ್ಲೆಕ್ಸ್ ಮತ್ತು ಓಟಿಟಿ ಎಂಬ ಹೊಸ ಆವಿಷ್ಕಾರದಿಂದ ಸಾಕಷ್ಟು ಸಿಂಗಲ್ ಸ್ಕ್ರೀನ್  ಚಿತ್ರಮಂದಿರಗಳು ಈಗಾಗಲೇ ಬೀಗ ಹಾಕಿಕೊಂಡಿದೆ. ಮಲ್ಟಿಪ್ಲೆಕ್ಸ್ ಇರುವ ಕಾರಣ ನಿಮಗೆ ಸಿನಿಮಾಗಳ ಆಯ್ಕೆಯಲ್ಲಿಯೂ ನಿಮಗೆ ಆಪ್ಷನ್ ಇದೆ. ಇನ್ನು ಓಟಿಟಿ ಬಗ್ಗೆ ಹೇಳೋದಾದರೆ ಇನ್ನೂ ಒಂದು ಹೆಜ್ಜೆ ಮುಂದೆಯೇ ಇದೆ. ನಿಮಗೆ ಬೇಕಾದ ಸಮಯದಲ್ಲಿ ಬೇಕಾದ ಸಿನಿಮಾವನ್ನು ಎಷ್ಟು ಬಾರಿ ಬೇಕಾದರೂ ನೋಡಬಹುದು. ಇಂದಿನ ಯುವಜನಾಂಗ ಈ ಪದ್ಧತಿಗೆ ಹೊಂದಿಕೊಂಡು ಥಿಯೇಟರ್ ಕಡೆ ಬರೋದನ್ನೇ ಕಡಿಮೆ ಮಾಡ್ತಿದೆ ಎಂದರೆ ತಪ್ಪಲ್ಲ.

ಆದರೆ ದಶಕಗಳ ಹಿಂದೆ ಹೀಗಿರಲಿಲ್ಲ. ನಿರ್ದಿಷ್ಟವಾದ ಸಮಯಕ್ಕೆ ಸಿನಿಮಾ ಶುರು ಆಗ್ತಿತ್ತು. ಇದೇ ಸಿನಿಮಾ ನೋಡಬೇಕು ಅಂತ ಜನ ಬರೋರು. ಆಧುನಿಕತೆ ಮತ್ತು ತಂತ್ರಜ್ಞಾನ ಹೆಚ್ಚಾದಂತೆಲ್ಲಾ ಜನರು ಸಿನಿಮಾ ನೋಡುವ ರೀತಿಯೇ ಬದಲಾಗಿದೆ.

ಯಾವ ಶೋಗೆ ಯಾವ ಜನ ಬರೋರು ಗೊತ್ತಾ?

ಸಿಂಗಲ್ ಸ್ಕ್ರೀನ್ ಇದ್ದ ಕಾಲದಲ್ಲಿ ದಿನಕ್ಕೆ ಕೇವಲ 4 ರಿಂದ 5 ಶೋ ಇರ್ತಿತ್ತು ಅಷ್ಟೇ. ಮಾರ್ನಿಂಗ್, ಮ್ಯಾಟ್ನಿ, ಫರ್ಸ್ಟ್ ಶೋ, ಸೆಕೆಂಡ್ ಶೋ, ಹಾಗೂ ನೈಟ್ ಶೋ. ಹೆಚ್ಚು ಸಿನಿಮಾ ಮಂದಿರಗಳಲ್ಲಿ 4ಕ್ಕೇ ಶೋ ಮಾಡುತ್ತಿದ್ದರು.

ಮಾರ್ನಿಂಗ್ ಶೋ : ಚಿತ್ರಮಂದಿರಗಳಲ್ಲಿ ಮಾರ್ನಿಂಗ್ ಶೋ ಶುರುವಾಗುತ್ತಿದ್ದದ್ದು ಬೆಳಗ್ಗೆ 10:30ಕ್ಕೆ. ಈ ಶೋಗೆ ಸಾಕಷ್ಟು ಕಾಲೇಜು ಹುಡುಗ ಹುಡುಗಿಯರು, ಗೃಹಿಣಿಯರೇ ಹೆಚ್ಚಾಗಿ ಕಾಣಿಸಿಕೊಳ್ಳುತ್ತಿದ್ದರು. ಬೆಳಗ್ಗೆ ಎರಡು ಕ್ಲಾಸ್ ಮುಗಿಸಿಕೊಂಡು ಮಾರ್ನಿಂಗ್ ಶೋ ಸಿನಿಮಾಗೆ ಬರ್ತಿದ್ದರು ಕಾಲೇಜ್ ತರುಣ ತರುಣಿಯರು. ಇನ್ನು ನಮ್ಮ ಗೃಹಿಣಿಯರು ಗಂಡ ಮಕ್ಕಳು ಮತ್ತು ಅವರ ಕೆಲಸಗಳನ್ನೆಲ್ಲಾ ಮುಗಿಸಿ ಬೆಳಗ್ಗೆ ಶೋಗೆ ಬರುತ್ತಿದ್ದರು. ಮ್ಯಾಟ್ನಿ ಅಥವಾ ಫರ್ಸ್ಟ್ ಶೋ ಗೃಹಿಣಿಯರಿಗೆ ಆಗದ ಮಾತು, ಯಾಕೆಂದರೆ ಸಂಜೆ 4 ಗಂಟೆ ಮೇಲೆ ಮಕ್ಕಳು ಮತ್ತು ಗಂಡ ಎಲ್ಲರೂ ವಾಪಸ್ ಬರ್ತಾರೆ ಅಷ್ಟರೊಳಗೆ ಮನೆಗೆ ಬಂದು ಸೇರ್ಕೋಬೇಕು ಎಂಬುದು ಗೃಹಿಣಿಯರ ಆಲೋಚನೆ. ಹಾಗಾಗಿ ಬೆಳಗಿನ ಶೋಗೆ ಹೆಚ್ಚಾಗಿ ಗೃಹಿಣಿಯರು ಮತ್ತು ಕಾಲೇಜ್ ಹುಡುಗರೇ ತುಂಬಿರುತ್ತಿದ್ದರು. ಇನ್ನು ವ್ಯಾಪಾರಿ ಜಾಗಗಳಾದ ಗಾಂಧಿನಗರ ಮತ್ತು ಇನ್ನಿತೆ ಪ್ರಮುಖ ಜಾಗಗಳಲ್ಲಿ ಮಾರ್ನಿಂಗ್ ಶೋಗೆ ಜನ ಬರ್ತಿರಲಿಲ್ಲ. ವ್ಯಾಪಾರ ವಹಿವಾಟಿನ ಮೇಲೆ ಬಂದ ಜನರೆಲ್ಲಾ ಬ್ಯುಸಿ ಇರುವ ಸಮಯ ಇದಾದ ಕಾರಣ ಅವರೆಲ್ಲಾ ಮ್ಯಾಟ್ನಿ ಅಥವಾ ಫರ್ಸ್ಟ್ ಶೋ ಸಿನಿಮಾಗೆ ಹೋಗೋರು.

 

ಮ್ಯಾಟ್ನಿ ಶೋ : ಮ್ಯಾಟ್ನಿ ಶೋ ಸಿನಿಮಾಗೂ ಕೂಡ ಕಾಲೇಜು ವಿದ್ಯಾರ್ಥಿಗಳೇ ಹೆಚ್ಚಾಗಿ ಬರುತ್ತಿದ್ದರು. ಕಾಲೇಜು ಹುಡುಗ ಹುಡುಗಿಯರೇ ಈ ಶೋ ತುಂಬಾ ತುಂಬಿರುತ್ತಿದ್ದರು. ಮಧ್ಯಾಹ್ನ ಸುಮಾರು 1.30 ಅಥವಾ 2ಕ್ಕೆ ಶುರು ಆಗುತ್ತಿದ್ದ ಈ ಶೋಗಳಲ್ಲಿ ಕಾಲೇಜ್ ಹುಡುಗ ಹುಡುಗಿಯರು ಬಿಟ್ಟರೆ ಕೆಲಸದ ಮೇಲೆ ಸಿಟಿಗೆ ಬಂದವರು ಬಿಡುವಿನ ಸಮಯವನ್ನು ಸಿನಿಮಾಗಾಗಿ ಮೀಸಲಿಡುತ್ತಿದ್ದರು.

 

ಫರ್ಸ್ಟ್ ಶೋ ಅಂದ್ರೆ ಫ್ಯಾಮಿಲಿ : ಸಾಯಂಕಾಲ 5 ಅಥವಾ 6ರ ಆಸುಪಾಸಿನಲ್ಲಿ ಶುರುವಾಗುತ್ತಿದ್ದ ಈ ಶೋಗೆ ಹೆಚ್ಚಾಗಿ ಫ್ಯಾಮಿಲಿಗಳೇ ಬರುತ್ತಿದ್ದದ್ದು. ಸಾಯಂಕಾಲ ಕೆಲಸ ಮುಗಿಸಿಕೊಂಡು ಮನೆಗೆ ಬರುವಾಗಲೇ ಟಿಕೇಟ್ ತೆಗೆದುಕೊಂಡು ಬರುತ್ತಿದ್ದ ಯಜಮಾನರು, ಮನೆಯವರು ಬಂದ ಕೂಡಲೇ ರೆಡಿಯಾಗಿ ಥೀಯೇಟರ್ ಕಡೆಗೆ ದೌಡು. ಸಿನಿಮಾ ಮುಗಿಸಿಕೊಂಡು ಒಳ್ಳೆ ಹೋಟೆಲ್ ಒಂದರಲ್ಲಿ ಊಟ ಮಾಡಿ ಮನೆಗೆ ಬಂದರೆ ಅಂದಿನ ಆ ದಿನ ಕಂಪ್ಲೀಟ್ ಆಗ್ತಿತ್ತು.

ಇನ್ನು ನೈಟ್ ಶೋ ಅಂದರೆ ಬ್ಯಾಚುಲರ್ಸ್ : ಸಾಯಂಕಾಲ ಕೆಲಸ ಮುಗಿಸಿ ನಂತರ ಸ್ವಲ್ಪ ಕಾಲ ಯಾವುದಾದರೂ ಅಡ್ಡದಲ್ಲಿ ಸಮಯ ಕಳೆದು ರಾತ್ರಿ ಸಿನಿಮಾಗೆ ಬರ್ತಿದ್ದೋರೇ ಬ್ಯಾಚುಲರ್ಸ್ ಅಂಡ್ ಅಂಕಲ್ಸ್. ನಿರ್ದಿಷ್ಟ ಅವಧಿಯಲ್ಲಿ ಮನೆ ಸೇರಬೇಕು ಎಂಬ ಕೆಟಗರಿ ಇಂದ ಆಚೆ ಉಳಿದವರು ಇವರು. ನೈಟ್ ಶೋ ಸಿನಿಮಾ ಮುಗಿಸಿಕೊಂಡು ಮನೆಗೆ ಹೋಗುತ್ತಿದ್ದರೆ ಪೊಲೀಸರ ಕಾಟ ಬೇರೆ. ಅವರಿಗೆ ಸೆಕೆಂಡ್ ಶೋ ಟಿಕೇಟ್ ತೋರಿಸಿದರೆ ಮಾತ್ರ ಬಿಡುತ್ತಿದ್ದರು ಇಲ್ಲವಾದರೆ ಸಾವಿರ ತಾಕೀತುಗಳು.

 

ಹಳ್ಳಿಗಳಲ್ಲಿ ರಾತ್ತಿ 9ಕ್ಕೆ “ನಮೋ ವೆಂಕಟೇಶ”

ದಶಕಗಳ ಹಿಂದೆಯೂ ಸಿನಿಮಾಗಳೆಂದರೆ ಕೇವಲ ನಗರಕ್ಕೆ ಸೀಮಿತವಾಗಿರಲಿಲ್ಲ. ಹಳ್ಳಿಗಳಲ್ಲಿಯೂ ಸಿನಿಮಾಗಳು ಪ್ರದರ್ಶನಗೊಳ್ಳುತ್ತಿದ್ದವು. ಆದರೆ ನಗರಗಳಂತೆ ಹಳ್ಳಿಗಳಲ್ಲಿ ನಾಲ್ಕು ಶೋಗಳು ಇರುತ್ತಿರಲಿಲ್ಲ. ಬದಲಿಗೆ ಒಂದೇ ಶೋ ಅದೂ ಕೂಡ ರಾತ್ರೀ 9ಗಂಟೆಗೆ. ಹಳ್ಳಿ ಜನ ಬೆಳಗ್ಗಿನಿಂದ ತಮ್ಮ ದೈನಂದಿನ ಚಟುವಟಿಕೆಯಲ್ಲಿ ನಿರತರಾಗಿರುವ ಕಾರಣ ಅವರಿಗೆ ಬಿಡುವಿನ ಸಮಯ ಅನ್ನೋದು ಸಿಗುತ್ತಿದದ್ದೇ ರಾತ್ರಿ ಹೊತ್ತು. ರಾತ್ರಿ ಊಟ ಮುಗಿಸಿ ಎತ್ತಿನ ಗಾಡಿ ಕಟ್ಟಿಕೊಂಡು ಗುಂಪು ಗುಂಪಾಗಿ ಬಂದು ಸಿನಿಮಾ ನೋಡಿ ಹೋಗುತ್ತಿದ್ದರು. ನಮೋ ವೆಂಕಟೇಶ ಹಾಡು ಮುಗಿಯಿತು ಎಂದರೆ ಸಿನಿಮಾ ಪ್ರದರ್ಶನ ಶುರು ಎಂದರ್ಥ. ಎಷ್ಟೋ ಜನ ನಮೋ ವೆಂಕಟೇಶ ಹಾಡು ಹಾಕಿದ ಕೂಡಲೇ ಚಿತ್ರ ಮಂದಿರಗಳ ಕಡೆ ಓಡಿ ಹೋಗುತ್ತಿದ್ದರು.

ಈಗ ಈ ರೀತಿಯ ವೈಭವದ ದಿನಗಳನ್ನು ನಾವು ಕಾಣಲು ಸಾಧ್ಯವಿಲ್ಲ.  ಆಡಂಬರದ ಜೀವನಕ್ಕೆ ಮಾರುಹೋಗಿರುವ ನಾವು ಈ ದಿನಗಳ ಬಗ್ಗೆ ಕೇಳಿ ತಿಳಿಯಬೇಕಾಗಿದೆಯೇ ಹೊರತು ಅನುಭವಕ್ಕೆ ಸಿಗುವುದಿಲ್ಲ.

Share Post