BengaluruDistrictsPolitics

ಬಿಜೆಪಿ-ಜೆಡಿಎಸ್‌ ಮೈತ್ರಿಯಾದರೆ ಮಂಡ್ಯ ಟಿಕೆಟ್‌ ಯಾರಿಗೆ..?; ಸುಮಲತಾಗೆ ಶುರುವಾಯ್ತಾ ಚಿಂತೆ..?

ಬೆಂಗಳೂರು; ಲೋಕಸಭಾ ಚುನಾವಣೆಯಲ್ಲಿ ರಾಜ್ಯದಲ್ಲಿ ಬಿಜೆಪಿ ಹಾಗೂ ಜೆಡಿಎಸ್‌ ಮೈತ್ರಿ ಬಹುತೇಕ ಪಕ್ಕಾ ಆಗಿದೆ. ಈ ಬಗ್ಗೆ ದೇವೇಗೌಡರು ಹಾಗೂ ಕೇಂದ್ರದ ಬಿಜೆಪಿ ನಾಯಕರು ಚರ್ಚೆ ಮಾಡಿದ್ದಾರೆ ಅಂತ ನಿನ್ನೆ ಮಾಜಿ ಸಿಎಂ ಬೊಮ್ಮಾಯಿ ಹೇಳಿದ್ದಾರೆ. ಇತ್ತ ಮಾಜಿ ಸಿಎಂ ಹೆಚ್‌.ಡಿ.ಕುಮಾರಸ್ವಾಮಿ ದೆಹಲಿಗೆ ಹೋಗಿ ಬಿಜೆಪಿ ನಾಯಕರನ್ನು ಭೇಟಿಯಾಗಲು ಸಿದ್ಧತೆ ನಡೆಸಿದ್ದಾರೆ. ಒಂದು ವೇಳೆ ರಾಜ್ಯದಲ್ಲಿ ಬಿಜೆಪಿ ಹಾಗೂ ಜೆಡಿಎಸ್‌ ಮೈತ್ರಿಯಾದರೆ ಮಂಡ್ಯ ಲೋಕಸಭಾ ಕ್ಷೇತ್ರವನ್ನು ಯಾರಿಗೆ ಬಿಟ್ಟುಕೊಡುತ್ತಾರೆ ಎಂಬ ಕುತೂಹಲ ಎದುರಾಗಿದೆ.

ಕಳೆದ ಬಾರಿ ಬಿಜೆಪಿ ಬೆಂಬಲದೊಂದಿಗೆ ಪಕ್ಷೇತರವಾಗಿ ಸ್ಪರ್ಧೆ ಮಾಡಿದ್ದ ಸುಮಲತಾ ಅಂಬರೀಶ್‌ ಅವರು ಕುಮಾರಸ್ವಾಮಿಯವರ ಪುತ್ರ ನಿಖಿಲ್‌ ಕುಮಾರಸ್ವಾಮಿ ವಿರುದ್ಧ ಪ್ರಚಂಡ ಬಹುಮತದಿಂದ ಗೆದ್ದಿದ್ದರು. ಇದೀಗ, ಸುಮಲತಾ ಅವರು ಬಹಿರಂಗವಾಗಿ ಬಿಜೆಪಿಗೆ ಬೆಂಬಲ ಘೋಷಣೆ ಮಾಡಿದ್ದಾರೆ. ಪಕ್ಷ ಸೇರ್ಪಡೆಗೆ ಕಾನೂನು ಅಡ್ಡಿ ಇರುವುದರಿಂದ ಅವರು ಅಧಿಕೃತವಾಗಿ ಬಿಜೆಪಿ ಸೇರಿಲ್ಲ ಅಷ್ಟೇ. ಕಳೆದ ವಿಧಾನಸಭಾ ಚುನಾವಣೆಯಲ್ಲೂ ಅವರು ಬಿಜೆಪಿ ಪರವಾಗಿ ಪ್ರಚಾರ ಮಾಡಿದ್ದರು. ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಅವರು ಬಿಜೆಪಿ ಟಿಕೆಟ್‌ ಪಡೆದು ಸ್ಪರ್ಧೆ ಮಾಡೋ ಆಸೆ ಹೊಂದಿದ್ದಾರೆ. ಆದ್ರೆ, ಇದೀಗ ಜೆಡಿಎಸ್‌ ನಾಯಕರು ಬಿಜೆಪಿ ಜೊತೆ ಹೊಂದಾಣಿಕೆಗೆ ಮುಂದಾಗಿರುವ ಸುಳಿವು ಸಿಗುತ್ತಿದೆ.

ಒಂದು ವೇಳೆ ಜೆಡಿಎಸ್‌-ಬಿಜೆಪಿ ಮೈತ್ರಿಯಾದರೆ, ಹಾಸನ, ಮಂಡ್ಯ, ಬೆಂಗಳೂರು ಗ್ರಾಮಾಂತರ, ತುಮಕೂರು ಕ್ಷೇತ್ರಗಳನ್ನು ಕೇಳುವ ಸಾಧ್ಯತೆ ಹೆಚ್ಚಿದೆ. ಇದರಲ್ಲಿ ಮಂಡ್ಯ ಹಾಗೂ ಹಾಸನ ಕ್ಷೇತ್ರಗಳನ್ನಂತೂ ಜೆಡಿಎಸ್‌ ಬಿಟ್ಟು ಕೊಡೋದಿಲ್ಲ. ಹಾಗಾದ್ರೆ, ಬಿಜೆಪಿ ಈ ಎರಡೂ ಕ್ಷೇತ್ರಗಳನ್ನು ಜೆಡಿಎಸ್‌ಗೆ ಬಿಟ್ಟುಕೊಡಲೇ ಬೇಕಾಗುತ್ತದೆ. ಯಾಕಂದ್ರೆ ಈ ಎರಡೂ ಕ್ಷೇತ್ರದಲ್ಲಿ ಜೆಡಿಎಸ್‌ ಪ್ರಬಲವಾಗಿದೆ. ಬಿಜೆಪಿಗೆ ಅಷ್ಟೇನೂ ನೆಲೆ ಇಲ್ಲ. ಮಂಡ್ಯದಲ್ಲಂತೂ ಬಿಜೆಪಿಗೆ ಶಕ್ತಿ ಇಲ್ಲ ಅನ್ನೋದು ಕಳೆದ ವಿಧಾನಸಭಾ ಚುನಾವಣೆಯಲ್ಲಿ ಸಾಬೀತಾಗಿದೆ. ಹೀಗಾಗಿ ಮಂಡ್ಯ ಕ್ಷೇತ್ರವನ್ನು ಬಿಜೆಪಿ ನಾಯಕರು ಜೆಡಿಎಸ್‌ಗೆ ಬಿಟ್ಟು ಕೊಡೋದು ಪಕ್ಕಾ. ಹಾಗಿದ್ರೆ, ಹಾಲಿ ಸಂಸದೆ ಸುಮಲತಾ ಏನು ಮಾಡುತ್ತಾರೆ ಅನ್ನೋದೇ ಪ್ರಶ್ನೆ.

ಸದ್ಯದ ಪರಿಸ್ಥಿತಿಯಲ್ಲಿ ಪಕ್ಷೇತರರಾಗಿ ಸ್ಪರ್ಧೆ ಮಾಡಿದರೆ ಸುಮಲತಾಗೆ ಗೆಲ್ಲೋದು ಕಷ್ಟವಾಗುತ್ತದೆ. ಮೈತ್ರಿಯಾದರೆ ಬಿಜೆಪಿಯಿಂದ ಟಿಕೆಟ್‌ ಸಿಗೋದು ಕಷ್ಟ ಕಷ್ಟ. ಕಾಂಗ್ರೆಸ್‌ಗೆ ಹೋಗಿ ಅಲ್ಲಿ ಟಿಕೆಟ್‌ ಪಡೆಯೋದು ಕೂಡಾ ಅಷ್ಟು ಸುಲಭದ ಮಾತಲ್ಲ. ಹೀಗಾಗಿ, ಸುಮಲತಾಗೆ ಈ ಬಗ್ಗೆ ಚಿಂತೆ ಶುರುವಾದಂತೆ ಕಾಣುತ್ತಿದೆ.

Share Post