Bengaluru

ತಿಳಿಗೇಡಿ ಯುವಕನಿಂದ ಪಠ್ಯ ಪರಿಷ್ಕರಣೆ; ಇದು ರಾಜ್ಯಕ್ಕೆ ಮಾಡಿದ ಅಪಮಾನ ಎಂದ ಸಿದ್ದರಾಮಯ್ಯ

ಬೆಂಗಳೂರು: ರಾಜ್ಯದಲ್ಲಿ ರಾಷ್ಟ್ರ-ಅಂತರರಾಷ್ಟ್ರೀಯ ಮಟ್ಟದಲ್ಲಿ ಗೌರವಕ್ಕೆ ಪಾತ್ರರಾಗಿರುವ ಸಾಹಿತಿಗಳು, ಚಿಂತಕರು ಮತ್ತು ಶಿಕ್ಷಣ ತಜ್ಞರಿದ್ದಾರೆ. ಅವರೆಲ್ಲರನ್ನೂ ಬಿಟ್ಟು ಸಂಘ ಪರಿವಾರಕ್ಕೆ ಸೇರಿದ ತಿಳಿಗೇಡಿ ಯುವಕನಿಂದ ಪಠ್ಯ ಪರಿಷ್ಕರಣೆ ಮಾಡಿಸಲಾಗಿದೆ. ಇದು ರಾಜ್ಯದ ಜನತೆಗೆ ಮಾಡಿರುವ ಅವಮಾನ ಎಂದು ಪ್ರತಿಪಕ್ಷ ನಾಯಕ ಸಿದ್ದಾರಮಯ್ಯ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಶಾಲಾ ಪಠ್ಯ ಪರಿಷ್ಕರಣೆ ಸಂಬಂಧ ಟ್ವೀಟ್‌ ಮಾಡಿರುವ ಅವರು, ಪಠ್ಯಪುಸ್ತಕ ಪರಿಷ್ಕರಣೆಗೆ ಸಂಬಂಧಿಸಿದಂತೆ ಮಾಧ್ಯಮಗಳಲ್ಲಿ ಪ್ರಕಟವಾಗಿರುವ ವರದಿಗಳೇ ನಿಜವೆಂದಾದರೆ ಇದು ಅಕ್ಷಮ್ಯ ಅಪರಾಧ. ಈ ಹಿನ್ನೆಲೆಯಲ್ಲಿ ಅನಗತ್ಯ ಊಹಾಪೋಹ ಮತ್ತು ಸಂಘರ್ಷಕ್ಕೆ ಅವಕಾಶ ನೀಡದೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರೇ ಖುದ್ದಾಗಿ ಸ್ಪಷ್ಟೀಕರಣ ನೀಡಬೇಕು ಎಂದು ಆಗ್ರಹಿಸಿದ್ದಾರೆ.

ಪಠ್ಯಪುಸ್ತಕ ಪರಿಷ್ಕರಣೆಯ ವಿವಾದದಿಂದಾಗಿ ರಾಷ್ಟ್ರಮಟ್ಟದಲ್ಲಿ ಕರ್ನಾಟಕ ತಲೆ ತಗ್ಗಿಸುವಂತಾಗಿದೆ. ಪಠ್ಯಪುಸ್ತಕ ಪರಿಷ್ಕರಣೆಯಂತಹ ಗಂಭೀರ ಕಾರ್ಯವನ್ನು ನಾಡಿನ ಹಿರಿಯ ಲೇಖಕರು, ಸಮಾಜ ಸುಧಾರಕರನ್ನು ಅವಹೇಳನ ಮಾಡುತ್ತಾ ಬಂದಿರುವ ಅನರ್ಹ, ಪೂರ್ವಗ್ರಹ ಪೀಡಿತ ವ್ಯಕ್ತಿಯಿಂದ ಮಾಡಿಸಿರುವುದೇ ನಾಡು-ನುಡಿಗೆ ಬಗೆದಿರುವ ದ್ರೋಹ ಎಂದು ಸಿದ್ದರಾಮಯ್ಯ ಕಿಡಿಕಾರಿದ್ದಾರೆ.

 

Share Post