BengaluruCrimePolitics

ವಿನಯ್‌ ಕುಲಕರ್ಣಿಗೆ ಮತ್ತೆ ಹಿನ್ನಡೆ; ಧಾರವಾಡ ಪ್ರವೇಶಕ್ಕಿಲ್ಲ ಅವಕಾಶ

ಬೆಂಗಳೂರು; ಧಾರವಾಡ ಕ್ಷೇತ್ರದಿಂದ ಕಾಂಗ್ರೆಸ್‌ ಅಭ್ಯರ್ಥಿಯಾಗಿ ಕಣಕ್ಕಿಳಿದಿರುವ ಹಾಲಿ ಶಾಸಕ ವಿನಯ್‌ ಕುಲಕರ್ಣಿಗೆ ಮತ್ತೆ ಕಾನೂನು ಹಿನ್ನಡೆಯಾಗಿದೆ. ವಿನಯ್‌ ಕುಲಕರ್ಣಿಯವರಿಗೆ ಧಾರವಾಡ ಪ್ರವೇಶಕ್ಕೆ ಅನುಮತಿ ನೀಡಲು ಹೈಕೋರ್ಟ್‌ ನಿರಾಕರಿಸಿದೆ. ಹೀಗಾಗಿ, ಅವರು ಧಾರವಾಡದಿಂದ ದೂರ ಇದ್ದೇ ಚುನಾವಣೆ ಎದುರಿಸಬೇಕಾದ ಪರಿಸ್ಥಿತಿ ಬಂದಿದೆ.

ಹತ್ತು ವರ್ಷದ ಹಿಂದೆ ಧಾರವಾಡದಲ್ಲಿ ಜಿಲ್ಲಾ ಪಂಚಾಯತ್‌ ಸದಸ್ಯರಾಗಿದ್ದ ಯೋಗೀಶ್‌ ಗೌಡರ ಕೊಲೆ ನಡೆದಿತ್ತು. ಈ ಪ್ರಕರಣದಲ್ಲಿ ವಿನಯ್‌ ಕುಲಕರ್ಣಿ ಕೈವಾಡ ಬಲವಾಗಿ ಕೇಳಿಬಂದಿತ್ತು. ಈ ಮಧ್ಯೆ ರಾಜ್ಯ ಸರ್ಕಾರ ಪ್ರಕರಣವನ್ನು ಸಿಬಿಐಗೆ ವಹಿಸಿತ್ತು. ಸಿಬಿಐ ವಿನಯ್‌ ಕುಲಕರ್ಣಿಯವರನ್ನು ಬಂಧಿಸಿ ವಿಚಾರಣೆ ನಡೆಸಿತ್ತು. ಹಲವು ತಿಂಗಳುಗಳ ಕಾಲ ಜೈಲಿನಲ್ಲಿದ್ದ ವಿನಯ್‌ ಕುಲಕರ್ಣಿ, ಸುಪ್ರೀಂ ಕೋರ್ಟ್‌ನಿಂದ ಜಾಮೀನು ಪಡೆದು ಕೆಲ ತಿಂಗಳ ಹಿಂದೆ ಹೊರಬಂದಿದ್ದಾರೆ. ಆದ್ರೆ ಜಾಮೀನು ನೀಡುವಾಗ ಕೋರ್ಟ್‌, ಸಾಕ್ಷ್ಯನಾಶ ಸಾಧ್ಯತೆ ಹಿನ್ನೆಲೆಯಲ್ಲಿ ಧಾರವಾಡ ಜಿಲ್ಲೆ ಪ್ರವೇಶಕ್ಕೆ ನಿರ್ಬಂಧ ಹೇರಿತ್ತು.

ಆದ್ರೆ ಈಗ ಕಾಂಗ್ರೆಸ್‌ ಧಾರವಾಡದಿಂದಾನೇ ಅವರಿಗೆ ಟಿಕೆಟ್‌ ನೀಡಿದೆ. ಈಗಾಗಲೇ ನಾಮಪತ್ರವನ್ನೂ ಸಲ್ಲಿಸಲಾಗಿದೆ. ಹೀಗಾಗಿ ಪ್ರಚಾರಕ್ಕಾಗಿ ಒಂದು ತಿಂಗಳ ಮಟ್ಟಗೆ ಧಾರವಾಡ ಪ್ರವೇಶಕ್ಕೆ ಅನುಮತಿ ನೀಡಬೇಕೆಂದು ವಿನಯ್‌ ಕುಲಕರ್ಣಿ ಕೋರಿದ್ದರು. ಆದ್ರೆ ಇದನ್ನು ನಿರಾಕರಿಸಿದ ಹೈಕೋರ್ಟ್‌, ಸುಪ್ರೀಂ ಕೋರ್ಟ್‌ ಈಗಾಗಲೇ ವಿನಯ್‌ ಕುಲಕರ್ಣಿ ಧಾರವಾಡ ಪ್ರವೇಶಕ್ಕೆ ನಿರ್ಬಂಧ ಹೇರಿದೆ. ಹೀಗಿದ್ದರೂ ಕಾಂಗ್ರೆಸ್‌ ಹೈಕಮಾಂಡ್‌ ಯಾಕೆ ಅವರಿಗೆ ಟಿಕೆಟ್‌ ನೀಡಿದೆ ಎಂದು ಪ್ರಶ್ನೆ ಮಾಡಿದೆ. ಯಾವುದೇ ಕಾರಣಕ್ಕೂ ಅನುಮತಿ ನೀಡೋದಿಲ್ಲ ಎಂದು ಹೇಳಿದೆ.

ನಿನ್ನೆ ಸೆಷನ್ಸ್‌ ಕೋರ್ಟ್‌ ಕೂಡಾ ಇದೇ ಆದೇಶ ನೀಡಿದ್ದನ್ನು ನೆನಪಿಸಿಕೊಳ್ಳಬಹುದು.

Share Post