ಸಂಬಳ 58 ಲಕ್ಷ ರೂಪಾಯಿ.. ಆದ್ರೆ ಜೀವನದಲ್ಲಿ ಸಂತೋಷವೇ ಇಲ್ಲ..!
ಬೆಂಗಳೂರು; ಎಲ್ಲವನ್ನೂ ಹಣದಿಂದಲೇ ಕೊಳ್ಳಬಹುದು ಎಂದು ಎಲ್ಲರೂ ಅಂದುಕೊಂಡಿರುತ್ತಾರೆ. ಹಣ ಒಂದಿದ್ದರೆ ಸಂತೋಷ ನಮ್ಮ ಜೊತೆ ಇರುತ್ತೆ ಎಂಬುದು ಬಹುತೇಕರ ಭಾವನೆ ಕೂಡಾ. ಆದ್ರೆ, ಕೇವಲ ಹಣದಿಂದ ಸಂತೋಷವನ್ನು ಪಡೆಯೋದಕ್ಕೆ ಆಗೋದಿಲ್ಲ ಎಂಬುದು ಸತ್ಯ. ಒಬ್ಬ ಸಾಫ್ಟ್‌ವೇರ್ ಎಂಜಿನಿಯರ್ ಗೋಳು ಕೇಳಿದರೆ ಹಣದಿಂದ ಸಂತೋಷ ಸಂಪಾದನೆ ಮಾಡೋದಕ್ಕೆ ಸಾಧ್ಯವಿಲ್ಲ ಅನ್ನೋದು ಅರ್ಥವಾಗುತ್ತದೆ.
ಬೆಂಗಳೂರು ಮೂಲದ ಸಾಫ್ಟ್‌ವೇರ್ ಎಂಜಿನಿಯರ್ ಸೋಷಿಯಲ್ ಮೀಡಿಯಾದಲ್ಲಿ ತನ್ನ ಗೋಳು ತೋಡಿಕೊಂಡಿದ್ದು, ಇದೀಗ ಅದು ಎಲ್ಲೆಡೆ ವೈರಲ್ ಆಗುತ್ತಿದೆ. ಆ ಎಂಜಿನಿಯರ್ ಏನು ಬರೆದುಕೊಂಡಿದ್ದಾರೋ ನೋಡಿ..
“ನಾನು ಸಾಫ್ಟ್‌ವೇರ್ ಇಂಜಿನಿಯರ್. ನನಗೆ 24 ವರ್ಷ ವಯಸ್ಸು. ನಾನು ಎರಡೂವರೆ ವರ್ಷಗಳಿಂದ ದೊಡ್ಡ ಕಂಪನಿಯೊಂದರಲ್ಲಿ ಕೆಲಸ ಮಾಡುತ್ತಿದ್ದೇನೆ. ನನ್ನ ಸಂಬಳ ವಾರ್ಷಿಕ 58 ಲಕ್ಷ ರೂಪಾಯಿ. ನನ್ನ ಬಳಿ ಎಲ್ಲವೂ ಇದೆ. ಆದರೆ ಜೀವನದಲ್ಲಿ ಸಂತೋಷವೇ ಇಲ್ಲ. ಒಬ್ಬ ಗೆಳತಿಯೂ ಇಲ್ಲ. ಸ್ನೇಹಿತರು ತಮ್ಮ ತಮ್ಮ ಕೆಲಸದಲ್ಲಿ ಬ್ಯುಸಿಯಾಗಿದ್ದಾರೆ. ಒಂಟಿತನ ನೋವುಂಟು ಮಾಡುತ್ತದೆ. ನನ್ನ ದೈನಂದಿನ ಕೆಲಸವೂ ನೀರಸವಾಗಿದೆ. ಏಕೆಂದರೆ ನಾನು ಪ್ರತಿದಿನ ಒಂದೇ ಕೆಲಸವನ್ನು ಮಾಡುತ್ತೇನೆ. ನನ್ನ ಕೆಲಸದ ಜೀವನದಲ್ಲಿ ಬೇರೆ ಯಾವುದೇ ಸವಾಲುಗಳಿಲ್ಲ ಎಂದು ನಾನು ಭಾವಿಸುತ್ತೇನೆ. ನನ್ನ ಜೀವನವನ್ನು ಆಸಕ್ತಿದಾಯಕವಾಗಿಸಲು ಏನು ಮಾಡಬೇಕೆಂದು ಹೇಳಿ. ದಯವಿಟ್ಟು ಜಿಮ್‌ಗೆ ಹೋಗಿ ಎಂದು ಸಲಹೆ ನೀಡಬೇಡಿ. ಯಾಕಂದ್ರೆ ನಾನು ಪ್ರತಿದಿನ ಜಿಮ್‌ಗೆ ಹೋಗುತ್ತೇನೆ, ”ಎಂದು ಅವರು ಪೋಸ್ಟ್ ಮಾಡಿದ್ದಾರೆ.
ಈ ಪೋಸ್ಟ್ ದೊಡ್ಡ ಮಟ್ಟದಲ್ಲಿ ವೈರಲ್ ಆಗುತ್ತಿದೆ. ಅದಕ್ಕೆ ಸಾವಿರಾರು ಕಾಮೆಂಟ್‌ಗಳು ಬಂದಿವೆ. ಕೆಲವರು ಖುಷಿಯಾಗಿರಲು ಟಿಪ್ಸ್ ಹೇಳುತ್ತಿದ್ದರೆ, ಇನ್ನು ಕೆಲವರು ಇಷ್ಟು ಸಂಬಳ ಬರುವ ಕೆಲಸ ಪಡೆಯಲು ಏನು ಓದಬೇಕು ಎಂದು ಕೇಳುತ್ತಿದ್ದಾರೆ.