ದಲಿತರ ಭಾವನೆಗೆ ಧಕ್ಕೆ ಆಗುವ ಗಾದೆ ಬಳಕೆ; ನಟ ಉಪೇಂದ್ರ ವಿರುದ್ಧ ಕೇಸ್ ದಾಖಲು
ಬೆಂಗಳೂರು; ದಲಿತರ ಭಾವನೆಗಳಿಗೆ ಧಕ್ಕೆ ಉಂಟು ಮಾಡಿದ್ದಾರೆ ಎಂಬ ಆರೋಪದ ಮೇಲೆ ನಟ ಹಾಗೂ ಉತ್ತಮ ಪ್ರಜಾಕೀಯ ಪಾರ್ಟಿ ಸಂಸ್ಥಾಪಕ ಉಪೇಂದ್ರ ವಿರುದ್ಧ ಎಫ್‌ಐಆರ್ ದಾಖಲಿಸಲಾಗಿದೆ. ಸಮಾಜ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕ ಮಧುಸೂದನ್ ಅವರು ಬೆಂಗಳೂರಿನ ಚೆನ್ನಮ್ಮನಕೆರೆ ಅಚ್ಚುಕಟ್ಟು ಪ್ರದೇಶ ಪೊಲೀಸ್ ಠಾಣೆಯಲ್ಲಿ ಕೇಸ್ ದಾಖಲಿಸಿದ್ದಾರೆ.
ಉತ್ತಮ ಪ್ರಜಾಕೀಯ ಪಕ್ಷ ಸ್ಥಾಪನೆ ಮಾಡಿ ನಾಲ್ಕು ವರ್ಷ ಆಗಿದೆ. ಈ ಹಿನ್ನೆಲೆಯಲ್ಲಿ ಪ್ರಜಾಕೀಯ ದಿನ ಆಚರಣೆ ಮಾಡಿದ್ದು, ಇದರ ಪ್ರಯುಕ್ತ ಉಪೇಂದ್ರ ಅವರು ಸಾಮಾಜಿಕ ಜಾಲತಾಣದಲ್ಲಿ ಲೈವ್ ಬಂದಿದ್ದರು. ಈ ವೇಳೆ ಅವರು ಗಾದೆ ಮಾತೊಂದನ್ನು ಹೇಳಿದ್ದರು. ಊರೆಂದರೆ ಹೊಲೆಗೇರಿ ಇದ್ದೇ ಇರುತ್ತದೆ ಎಂದು ಹೇಳಿದ್ದರು. ಇದಕ್ಕೆ ಉಪೇಂದ್ರ ವಿರುದ್ಧ ದಲಿತ ಸಂಘಟನೆಗಳು ಆಕ್ರೋಶ ವ್ಯಕ್ತಪಡಿಸಿವೆ. ಅವರ ವಿರುದ್ಧ ಕ್ರಮ ಆಗಬೇಕು ಎಂದು ಒತ್ತಾಯಿಸಿವೆ. ರಾಜ್ಯದ ಹಲವೆಡೆ ಈ ಬಗ್ಗೆ ಪ್ರತಿಭಟನೆಗಳು ನಡೆದಿವೆ. ಈ ನಡುವೆ ಉಪೇಂದ್ರ ವಿರುದ್ಧ ಎಫ್‌ಐಆರ್ ದಾಖಲಿಸಲಾಗಿದೆ.
ಇನ್ನು ನಿನ್ನೆಯೇ ಆಕ್ರೋಶ ವ್ಯಕ್ತವಾಗುತ್ತಿದ್ದಂತೆ ಉಪೇಂದ್ರ ಅವರು ಆ ವಿಡಿಯೋವನ್ನು ಡಿಲೀಟ್ ಮಾಡಿದ್ದರು. ನಂತರ ಫೇಸ್‌ಬುಕ್ ಹಾಗೂ ಇನ್ಸ್ಟಾಗ್ರಾಮ್‌ನಲ್ಲಿ ಲೈವ್ ಬಂದು ಕ್ಷಮೆಯನ್ನೂ ಕೇಳಿದ್ದರು. ಬಾಯಿತಪ್ಪಿ ಗಾದೆಯನ್ನು ಹೇಳಿದ್ದೇನೆ. ಇದರಿಂದ ಹಲವರ ಭಾವನೆಗಳಿಗೆ ಧಕ್ಕೆಯಾಗಿದೆ ಎಂದು ತಿಳಿದ ತಕ್ಷಣ ಆ ವಿಡಿಯೋವನ್ನು ಡಿಲೀಟ್ ಮಾಡಿದ್ದೇನೆ. ನಾನು ಆಡಿರುವ ಮಾತಿಗೆ ಕ್ಷಮೆ ಕೇಳುತ್ತೇವೆ ಎಂದು ಹೇಳಿದ್ದಾರೆ.
ಹೀಗಿದ್ದರೂ ಉಪೇಂದ್ರ ವಿರುದ್ಧ ದೊಡ್ಡ ಮಟ್ಟದಲ್ಲಿ ಆಕ್ರೋಶಗಳು ವ್ಯಕ್ತವಾಗುತ್ತಿವೆ. ಅವರು ಕಂಡಲ್ಲಿ ಮಸಿ ಬಳಿಯುತ್ತೇವೆ ಎಂದೂ ದಲಿತ ಸಂಘಟನೆಗಳು ಎಚ್ಚರಿಕೆ ಕೊಟ್ಟಿವೆ.