ಆಕ್ಷೇಪಾರ್ಹ ಹೇಳಿಕೆ ನೀಡಿದ್ದ ಉಪೇಂದ್ರಗೆ ನೋಟಿಸ್ ಜಾರಿ; ಮುಂದುವರೆದ ಪ್ರತಿಭಟನೆ
ಬೆಂಗಳೂರು; ಊರು ಅಂದ ಮೇಲೆ ಹೊಲಗೇರಿಯೂ ಇರುತ್ತದೆ ಎಂದು ದಲಿತ ಸಮುದಾಯದ ಭಾವನೆಗೆ ಧಕ್ಕೆ ಆಗುವ ರೀತಿಯಲ್ಲಿ ಮಾತನಾಡಿದ್ದ ನಟ ಹಾಗೂ ಉತ್ತಮ ಪ್ರಜಾಕೀಯ ಪಾರ್ಟಿ ಸಂಸ್ಥಾಪಕ ಉಪೇಂದ್ರ ಅವರಿಗೆ ಪೊಲೀಸರು೮ ನೋಟಿಸ್ ಜಾರಿ ಮಾಡಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಆಕ್ಷೇಪಾರ್ಹ ಹೇಳಿಕೆ ದಾಖಲಿಸಿದ್ದ ಉಪೇಂದ್ರ, ವಿರೋಧ ವ್ಯಕ್ತವಾಗುತ್ತಿದ್ದಂತೆ ಆ ವಿಡಿಯೋ ಡಿಲೀಟ್ ಮಾಡಿದ್ದರು. ಜೊತೆಗೆ ಮತ್ತೊಂದು ವಿಡಿಯೋ ಮಾಡಿ ಕ್ಷಮೆ ಕೂಡಾ ಕೇಳಿದ್ದರು. ಈ ನಡುವೆ ಚೆನ್ನಮ್ಮನಕೆರೆ ಅಚ್ಚುಕಟ್ಟು ಪೊಲೀಸ್ ಠಾಣೆ ಹಾಗೂ ಹಲಸೂರು ಗೇಟ್ ಪೊಲೀಸ್ ಠಾಣೆಗಳಲ್ಲಿ ಉಪೇಂದ್ರ ವಿರುದ್ಧ ಪ್ರತ್ಯೇಕ ದೂರುಗಳು ದಾಖಲಾಗಿದೆ.
ಚೆನ್ನಮ್ಮನಕೆರೆ ಅಚ್ಚುಕಟ್ಟು ಪೊಲೀಸ್ ಠಾಣೆಯಲ್ಲಿ ಸಮಾಜ ಕಲ್ಯಾಣ ಇಲಾಖೆ ಅಧಿಕಾರಿ ಮಧುಸೂದನ್ ಎಂಬುವವರು ದೂರು ದಾಖಲಿಸಿದ್ದರು. ಈ ಸಂಬಂಧ ಪೊಲೀಸರು ಉಪೇಂದ್ರಗೆ ನೋಟಿಸ್ ಜಾರಿ ಮಾಡಲಾಗಿದೆ. ಇಂದು ಅಧಿಕಾರಿ ಮಧುಸೂದನ್ ಅವರ ಸಮ್ಮುಖದಲ್ಲಿ ಪೊಲೀಸರು ಉಪೇಂದ್ರ ಅವರ ಮನೆಯ ಮಹಜರು ಮಾಡಲಿದ್ದಾರೆ. ಕತ್ರಿಗುಪ್ಪೆಯಲ್ಲಿ ಉಪೇಂದ್ರ ಅವರ ಮನೆ ಇದ್ದು, ಅಲ್ಲೇ ಉಪೇಂದ್ರ ವಿಡಿಯೋ ಮಾಡಿದ್ದರು. ಹೀಗಾಗಿ ಪೊಲೀಸರು ಇಂದು ಸ್ಥಳ ಮಹಜರು ಮಾಡಲಿದ್ದಾರೆ.
ಇನ್ನು ಉಪೇಂದ್ರ ವಿರುದ್ಧ ಹೋರಾಟಗಳು ಹೆಚ್ಚಾಗುತ್ತಿವೆ. ಇಂದು ಬೆಂಗಳೂರು ವಿಶ್ವವಿದ್ಯಾಲಯದ ವಿದ್ಯಾರ್ಥಿಗಳು ಪ್ರತಿಭಟನೆ ನಡೆಸಿದ್ದಾರೆ. ಇದಲ್ಲದೆ ರಾಜ್ಯದ ಹಲವೆಡೆ ಪ್ರತಿಭಟನೆಗಳನ್ನು ಹಮ್ಮಿಕೊಳ್ಳಲಾಗಿದೆ.