BengaluruPolitics

ಬಿ.ವೈ.ವಿಜಯೇಂದ್ರಗೆ ಮೇಲ್ಮನೆ ಟಿಕೆಟ್‌ ಇಲ್ಲ; ಕುಟುಂಬ ರಾಜಕಾರಣಕ್ಕೆ ಮನ್ನಣೆ ನೀಡದ ಹೈಕಮಾಂಡ್‌

ಬೆಂಗಳೂರು; ಮಾಜಿ ಸಿಎಂ ಯಡಿಯೂರಪ್ಪ ಅವರ ಪುತ್ರ ಹಾಗೂ ಬಿಜೆಪಿ ರಾಜ್ಯ ಉಪಾಧ್ಯಕ್ಷ ಬಿ.ವೈ.ವಿಜಯೇಂದ್ರ ಅವರಿಗೆ ವಿಧಾನಪರಿಷತ್‌ ಟಿಕೆಟ್‌ ನೀಡಲಾಗುತ್ತದೆ ಎಂದು ಎಲ್ಲರೂ ನಿರೀಕ್ಷಿಸಿದ್ದರು. ರಾಜ್ಯದ ನಾಯಕರು ಕೂಡಾ ವಿಜಯೇಂದ್ರ ಅವರ ಹೆಸರನ್ನು ಶಿಫಾರಸು ಮಾಡಿದ್ದರು. ಆದ್ರೆ, ಬಿಜೆಪಿ ಹೈಕಮಾಂಡ್‌ ಕುಟುಂಬ ರಾಜಕಾರಣಕ್ಕೆ ಮಣೆ ಹಾಕಿಲ್ಲ. ವಿಜಯೇಂದ್ರ ಅವರಿಗೆ ಟಿಕೆಟ್‌ ನಿರಾಕರಿಸಿರುವ ಬಿಜೆಪಿ ಹೈಕಮಾಂಡ್‌, ಮಾಜಿ ಸಿಎಂ ಯಡಿಯೂರಪ್ಪ ಅವರಿಗೆ ನಿರಾಸೆ ಮೂಡಿಸುವಂತೆ ಮಾಡಿದೆ. ನಾಲ್ವರಿಗೆ ಟಿಕೆಟ್‌ ಅಂತಿಮಗೊಳಿಸಲಾಗಿದೆ ಎಂದು ಬಲ್ಲ ಮೂಲಗಳಿಂದ ತಿಳಿದುಬಂದಿದ್ದು, ಅಧಿಕೃತವಾಗಿ ಇನ್ನೂ ಘೋಷಣೆ ಮಾಡಿಲ್ಲ.

 

ಮಹಿಳಾ ಕೋಟಾದಲ್ಲಿ ಹೇಮಲತಾ ನಾಯಕ, ದಲಿತ ಕೋಟಾದಲ್ಲಿ ಬಿಜೆಪಿ ಎಸ್‍ಸಿ ಘಟಕದ ರಾಜ್ಯಾಧ್ಯಕ್ಷ ಛಲವಾದಿ ನಾರಾಯಣ ಸ್ವಾಮಿಗೆ ಟಿಕೆಟ್‌ ನೀಡಲಾಗಿದೆ. ಇನ್ನು ಒಬಿಸಿ ಕೋಟಾದಲ್ಲಿ ಬಿಜೆಪಿ ಪಕ್ಷದ ಕಚೇರಿ ಕಾರ್ಯದರ್ಶಿಯಾಗಿದ್ದ ಕೇಶವ ಪ್ರಸಾದ್‌ಗೆ ಟಿಕೆಟ್ ದಕ್ಕಿದೆ ಎಂದು ಹೇಳಲಾಗುತ್ತಿದೆ. ಅಂದಹಾಗೆ ಇನ್ನೂ ಅಧಿಕೃತವಾಗಿ ಯಾರಿಗೂ ಟಿಕೆಟ್‌ ಘೋಷಣೆಯಾಗಿಲ್ಲ. ಆದರೆ ಈ ನಾಲ್ವರಿಗೆ ನಾಮಪತ್ರ ಸಲ್ಲಿಸಲು ಸಿದ್ಧತೆ ಮಾಡಿಕೊಳ್ಳುವಂತೆ ಆಂತರಿಕ ಸೂಚನೆ ನೀಡಲಾಗಿದೆ ಎಂದು ತಿಳಿದುಬಂದಿದೆ.

ವಿಜಯೇಂದ್ರ ಅವರನ್ನು ವಿಧಾನಪರಿಷತ್‌ಗೆ ಆಯ್ಕೆ ಮಾಡಿ, ಅವರನ್ನು ಸಂಪುಟಕ್ಕೆ ಸೇರಿಸಿಕೊಳ್ಳಲಾಗುತ್ತದೆ ಎಂದು ಎಲ್ಲರೂ ಭಾವಿಸಿದ್ದರು. ಆದರೆ ಎಲ್ಲರ ಅಂದಾಜೂ ಉಲ್ಟಾ ಆಗಿದೆ. ವಿಜಯೇಂದ್ರಗೆ ಟಿಕೆಟ್‌ ನಿರಾಕರಿಸುವುದರ ಮೂಲಕ ಕುಟುಂಬ ರಾಜಕಾರಣಕ್ಕೆ ಮಣೆ ಹಾಕುವುದಿಲ್ಲ ಎಂಬ ಸಂದೇಶವನ್ನು ಬಿಜೆಪಿ ಹೈಕಮಾಂಡ್‌ ರವಾನಿಸಿದೆ.

 

Share Post