Bengaluru

ಕೆಕೆಆರ್‌ಟಿಸಿಯಲ್ಲಿ ಪಾರದರ್ಶಕ ನೇಮಕಾತಿ ವಿಧಾನ; ಜನರ ಮೆಚ್ಚುಗೆಗೆ ಪಾತ್ರವಾಗಿ ಸಾರಿಗೆ ಸಂಸ್ಥೆ

ಕಲಬುರಗಿ; ಸರ್ಕಾರಿ ನೇಮಕಾತಿಗಳು ಪಾರದರ್ಶಕವಾಗಿ ನಡೆಯೋದಿಲ್ಲ, ಆಯ್ಕೆಯಲ್ಲಿ ಗೋಲ್‌ಮಾಲ್‌ ನಡೆಯುತ್ತೆ ಎಂಬ ಆರೋಪಗಳು ಯಾವಾಗಲೂ ಇದ್ದೇ ಇರುತ್ತವೆ. ಅದಕ್ಕೆ ಪೂರಕವಾಗಿ ಕೆಲ ಘಟನೆಗಳೂ ನಮಗೆ ಉದಾಹರಣೆಯಾಗಿವೆ. ಇತ್ತೀಚೆಗೆ ಪಿಎಸ್‌ಐ ನೇಮಕಾತಿಯಲ್ಲಿ ನಡೆದ ಹಗರಣವೇ ಇದಕ್ಕೆ ಉತ್ತಮ ಸಾಕ್ಷಿ. ಇದು ಹೀಗಿರುವಾಗಲೇ ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ ಯಾವುದೇ ಗೋಲ್‌ಮಾಲ್‌ ನಡೆಯದಂತೆ ಮಾಡಿ, ಅರ್ಹರಿಗೆ ಮಾತ್ರ ಉದ್ಯೋಗ ಸಿಗುವಂತೆ ಮಾಡಲು ವಿನೂತನ ಕ್ರಮ ಕೈಗೊಳ್ಳಲಾಗಿದೆ. ಕಲ್ಯಾಣ ಕರ್ಣಾಟಕ ರಸ್ತೆ ಸಾರಿಗೆ ಸಂಸ್ಥೆ ವತಿಯಿಂದ ಚಾಲಕರ ನೇಮಕಾತಿ ನಡೆಯುತ್ತಿದ್ದು, ಇದರಲ್ಲಿ ಪಾದರ್ಶಕತೆ ಕಾಪಾಡಲಾಗುತ್ತಿದೆ. ಅಧಿಕಾರಿಗಳು ಈ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತವಾಗುತ್ತಿದೆ.

ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ ಕಲಬುರಗಿಯಲ್ಲಿ ತನ್ನ ಕೇಂದ್ರ ಕಚೇರಿ ಹೊಂದಿದೆ. ಈ ಸಂಸ್ಥೆಯಲ್ಲಿ ಖಾಲಿಯಿರುವ 920 ಚಾಲಕರು ಮತ್ತು 694 ಚಾಲಕ ಕಂ ನಿರ್ವಾಹಕ ಹುದ್ದೆಗಳಿಗೆ ನೇಮಕಾತಿ ನಡೆಯುತ್ತಿದೆ. ಇದಕ್ಕೆ 38000 ಮಂದಿ ಅರ್ಜಿ ಸಲ್ಲಿಸಿದ್ದಾರೆ. ಆದ್ರೆ ಇದರಲ್ಲಿ ಕೇವಲ 1619 ಮಂದಿಯನ್ನು ಮಾತ್ರ ಆಯ್ಕೆ ಮಾಡಬೇಕು. ಪೈಪೋಟಿ ಹೆಚ್ಚಿರುವುದರಿಂದ ಲಾಬಿ ಕೂಡಾ ಹೆಚ್ಚಾಗಿ ನಡೆಯುವ ಸಾಧ್ಯತೆ ಇತ್ತು. ಆದ್ರೆ ಇದಕ್ಕೆಲ್ಲಾ ಬ್ರೇಕ್‌ ಹಾಕಲಾಗಿದೆ.

ಎತ್ತರ, ತೂಕ ಸೇರಿದಂತೆ ದೇಹದಾರ್ಢ್ಯ ಪರೀಕ್ಷೆಯಲ್ಲಿ ಆಯ್ಕೆಯಾಗಿರೋದು 21 ಸಾವಿರ ಮಂದಿ. ಇವರಿಗೆ ಜೂನ್‌ 3 ರಿಂದ  ಡ್ರೈವಿಂಗ್‌ ಪರೀಕ್ಷೆ ನಡೆಸಲಾಗುತ್ತಿದೆ. ಬೀದರ್ ಜಿಲ್ಲೆಯ ಹುಮ್ನಾಬಾದ್ ಪಟ್ಟಣದ ಹೊರವಲಯದಲ್ಲಿ ಈ ಪರೀಕ್ಷೆ ನಡೆಸಲಾಗುತ್ತಿದೆ. ಯಾಕಂದ್ರೆ ಇಲ್ಲಿ ಸಂಸ್ಥೆ ಪ್ರಾದೇಶಿಕ ಚಾಲನಾ ತರಬೇತಿ ಕೇಂದ್ರವಿದೆ. ಪ್ರತಿದಿನ ನೂರು ಅಭ್ಯರ್ಥಿಗಳಿಗೆ ಚಾಲನಾ ಪರೀಕ್ಷೆ ನಡೆಸಲಾಗುತ್ತದೆ. ಕಳೆದ ಎರಡೂವರೆ ತಿಂಗಳಿನಿಂದ ಮೂರು ಮಂದಿಗೆ ಟೆಸ್ಟ್‌ ಮಾಡಿದ್ದು, ನವೆಂಬರ್‌ ವೇಳೆಗೆ ಎಲ್ಲರ ಟೆಸ್ಟ್‌ ಮುಕ್ತಾಯವಾಗಲಿದೆ. ಡ್ರೈವಿಂಗ್‌ ಟೆಸ್ಟ್‌ನಲ್ಲಿ ಅತಿಹೆಚ್ಚು ಅಂಕ ಪಡೆದವರಿಗೆ ಕೆಲಸ ನೀಡಲಾಗುತ್ತದೆ. ಆದ್ರೆ ಈ ಟೆಸ್ಟ್‌ ವೇಳೆ ಗೋಲ್‌ಮಾಲ್‌ ನಡೆಯುವ ಸಾಧ್ಯತೆ ಇತ್ತು. ಆದ್ರೆ ಟೆಸ್ಟ್‌ ವೇಳೆ ಪಾರದರ್ಶಕತೆ ಕಾಪಾಡಲಾಗಿದ್ದು, ಗೋಲ್‌ಮಾಲ್‌ಗೆ ಯಾವುದೇ ಅವಕಾಶವಿಲ್ಲದಂತೆ ಅಧಿಕಾರಿಗಳು ನೋಡಿಕೊಂಡಿದ್ದಾರೆ.

ಟೆಸ್ಟ್‌ಗೆ ಗಣಕೀಕೃತ ಚಾಲನಾ ಪಥ ನಿರ್ಮಾಣ ಮಾಡಲಾಗಿದೆ. ಇದನ್ನು ಆನ್‌ಲೈನ್‌ ಹಾಗೂ ಸೆನ್ಸಾರ್‌ ಮೂಲಕ ನಡೆಸಲಾಗುತ್ತದೆ. ಹೀಗಾಗಿ ಅಭ್ಯರ್ಥಿಗಳಿಗೆ ಬಂದಿರುವ ಅಂಕಗಳು ಹಾಗೂ ಬೇರೆ ಅಭ್ಯರ್ಥಿಗಳಿಗೆ ಬಂದಿರುವ ಅಂಕಗಳು ಸ್ಥಳದಲ್ಲೇ ಗೊತ್ತಾಗುತ್ತದೆ.  www.kkrtcjobs.karnataka.gov.in ವೆಬ್​ ಸೈಟ್‌ನಲ್ಲಿ ಎಲ್ಲಾ ಮಾಹಿತಿ ಸಿಗುವಂತೆ ನೋಡಿಕೊಳ್ಳಲಾಗಿದೆ. ಇನ್ನು ಟೆಸ್ಟ್‌ಗೆ ಒಳಪಡುವ ಪ್ರತಿಯೊಬ್ಬ ಟೆಸ್ಟ್‌ ಡ್ರೈವ್‌ನ್ನು ರೆಕಾರ್ಡ್‌ ಮಾಡಲಾಗುತ್ತದೆ. ಜೊತೆಗೆ ಸಿಸಿಟಿವಿಗಳಲ್ಲೂ ಸೆರೆ ಹಿಡಿಯಲಾಗುತ್ತದೆ.

ಕೆಕೆಆರ್‌ಟಿಸಿ ಅಧಿಕಾರಿಗಳು ನೇಮಕಾತಿಯಲ್ಲಿ ಪಾರದರ್ಶಕತೆ ತೋರುತ್ತಿರುವುದರಿಂದ ಯಾವುದೇ ಗೋಲ್‌ಮಾಲ್‌ ನಡೆಸಲು ಆಗುತ್ತಿಲ್ಲ. ಜೊತೆಗೆ ಮಾರ್ಕ್ಸ್‌ ಕೂಡಾ ಆನ್‌ಲೈನ್‌ನಲ್ಲೇ ಸಿಗುವುದರಿಂದ ಅಭ್ಯರ್ಥಿಗಳು ತಾವು ಆಯ್ಕೆಯಾಗುತ್ತೇವೋ ಇಲ್ಲವೋ ಎಂಬುದನ್ನು ನಿರ್ಧರಿಸಲು ಸಾಧ್ಯವಾಗುತ್ತದೆ. ಜೊತೆಗೆ ಬೇರೆ ಅಭ್ಯರ್ಥಿಗಳ ಅಂಕಗಳೂ ಗೊತ್ತಾಗುವುದರಿಂದ ಅಧಿಕಾರಿಗಳು ಗೋಲ್‌ಮಾಲ್‌ ಮಾಡೋದಕ್ಕೆ ಸಾಧ್ಯವಿಲ್ಲ. ಹೀಗಾಗಿ ಅಧಿಕಾರಿಗಳ ಈ ಹೊಸ ನಡೆ ಸಾರ್ವಜನಿಕರ ಮೆಚ್ಚುಗೆ ಕಾರಣವಾಗಿದೆ.

 

Share Post